ಕಿಕ್ಕೇರಿ ಹೋಬಳಿಯ ಜಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ನಡೆಯಿತು. ಆರ್‌ಟಿಒ ಮಲ್ಲಿಕಾರ್ಜುನ, ರವಿಕುಮಾರ್, ರಮೇಶ್, ದೇವರಾಜು, ಶಿವರಾಜು, ಪ್ರಿಯಾ ಇತರರು ಇದ್ದರು.
ಕಿಕ್ಕೇರಿ: ಮಕ್ಕಳು ಶಿಕ್ಷಣ, ಜ್ಞಾನಾರ್ಜನೆಯ ಹಸಿವನ್ನು ಪ್ರೀತಿಯಿಂದ ಸ್ವೀಕರಿಸಿ ಸಂತೃಪ್ತಿಪಟ್ಟಿಕೊಳ್ಳಲು ಶಿಕ್ಷಕರು ಮಾರ್ಗದರ್ಶಕರಾಗಿದ್ದಾರೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.
ಹೋಬಳಿಯ ಜಕ್ಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಶಾರದಾ ಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ ಬಲವರ್ಧನೆ ಬಬು ಮುಖ್ಯವಾಗಿದೆ. ಬೇಸಿಗೆ ಬರುತ್ತಿದ್ದು ಶಾಲೆ ಮಕ್ಕಳಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ಕೊಳವೆ ಬಾವಿ ಕೊರೆಯಲು 50 ಸಾವಿರ ರೂ. ನೀಡಲಾಗುವುದು. ಒಂದನೆ ತರಗತಿಗೆ ದಾಖಲಾಗುವ ಎಲ್ಲ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಬ್ಯಾಂಕ್‌ಗೆ ಮಗುವಿನ ಹೆಸರಿನಲ್ಲಿ ಪ್ರತಿ ತಿಂಗಳು 500ರೂ. ನೀಡಲಾಗುವುದು. ಇಂಗ್ಲಿಷ್ ಕಲಿಕೆಗೆ ಶಿಕ್ಷಕರನ್ನು ತಮ್ಮ ಕಡೆಯಿಂದ ನೇಮಸಿ ಶಿಕ್ಷಕರಿಗೆ ತಾವೇ ಗೌರವ ಧನ ನೀಡಲಾಗುವುದು. ಸರ್ಕಾರಿ ಶಾಲೆ ಉಳಿವಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಮಾತನಾಡಿ, ಜಕ್ಕನಹಳ್ಳಿ ಕುಗ್ರಾಮವಾಗಿದೆ. ಇಲ್ಲಿನ ಶಾಲೆ ಯಾವುದೇ ಕಾರಣಕ್ಕೂ ಮುಚ್ಚುವಂತಹ ಸಂದಿಗ್ಧತೆ ಬರಬಾರದು. ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಉಳಿಸುವುದು ಎಲ್ಲರ ಕರ್ತವ್ಯ. ಬಡಮಕ್ಕಳು, ದುರ್ಬಲ ವರ್ಗದವರಿಗೆ ಸರ್ಕಾರಿ ಶಾಲೆ ಅಕ್ಷಯಪಾತ್ರೆಯಾಗಿದೆ. ಕಡ್ಡಾಯವಾಗಿ ಗ್ರಾಮದ ಎಲ್ಲ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ವಿನಂತಿಸಿದರು.
ಶಾರದಾ ಪೂಜೆ ನಡೆಯಿತು. ಮಕ್ಕಳು ಅಭಿನಯ ಗೀತೆ, ನೃತ್ಯ, ವಿವಿಧ ವೇಷ ಭೂಷಣ ಧರಿಸಿ ಹಾಡಿ ನಲಿದು ಸಂಭ್ರಮಿಸಿದರು. ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎಲ್.ಎಸ್.ಧರ್ಮಪ್ಪ, ಮುಖ್ಯಶಿಕ್ಷಕ ರವಿಕುಮಾರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಶಿವರಾಜು, ಗೋವಿಂದರಾಜು, ದೇವರಾಜು, ಯುವರಾಜು, ದೊಡ್ಡೇಗೌಡ, ಶಿವಮ್ಮ, ಪವಿತ್ರಾ ಇತರರು ಇದ್ದರು.