25ರಂದು ಆದಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಶ್ರೀರಂಗಪಟ್ಟಣದಲ್ಲಿ ನಡೆಯುವ ಬ್ರಹ್ಮರಥೋತ್ಸವಕ್ಕೆ ಸಿದ್ಧವಾಗಿರುವ ಕಾಷ್ಟ ರಥ.
ಶ್ರೀರಂಗಪಟ್ಟಣದಲ್ಲಿ ನಡೆಯುವ ಬ್ರಹ್ಮರಥೋತ್ಸವಕ್ಕೆ ಸಿದ್ಧವಾಗಿರುವ ಕಾಷ್ಟ ರಥ.
Published on

ಪ್ರಮುಖ ಮುಖ್ಯಾಂಶಗಳು

  • ಜ.25ರಂದು ಶ್ರೀ ಆದಿರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ
  • ದೇವಾಲಯದ ಆಡಳಿತ ಮಂಡಳಿ ಭರದ ಸಿದ್ಧತೆ
ಶ್ರೀರಂಗಪಟ್ಟಣ : ಐತಿಹಾಸಿಕ ಶ್ರೀರಂಗಪಟ್ಟಣದ ಕ್ಷೇತ್ರಪಾಲಕ ಶ್ರೀ ಆದಿರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ (ದೊಡ್ಡಜಾತ್ರೆ) ಜ.25ರಂದು ಜರುಗಲಿದ್ದು, ಇದಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಭರದ ಸಿದ್ಧತೆ ಕೈಗೊಂಡಿದೆ.
ಜ.23ರಂದು ಸಂಜೆ ಪ್ರಹ್ಲಾದ ಪರಿಪಾಲನೋತ್ಸವ, ಬ್ರಹ್ಮರಥೋತ್ಸವಕ್ಕೂ ಮುನ್ನದಿನ ಶನಿವಾರ ತಿರುನಾಳ್ ಗಜೇಂದ್ರ ಮೋಕ್ಷ ಆಚರಣೆ ನಡೆಯಲಿದೆ. ಅಂದು ಸಂಜೆ 7 ರಿಂದ ರಾತ್ರಿ 9 ರವರೆಗೆ ಕಲ್ಯಾಣಿಯಲ್ಲಿ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಸಮೇತವಿರುವ ಶ್ರೀರಂಗನಾಥಸ್ವಾಮಿ ಪಂಚಲೋಹದ ಉತ್ಸವ ಮೂರ್ತಿಗೆ ವೈದಿಕರು ಪುರಾಣ ಪಠಣೆ ನಡೆಸಿ ವಿಶೇಷ ಪೂಜೆಗಳ ಅರ್ಪಣೆಯೊಂದಿಗೆ ಗಜೇಂದ್ರ ಮೋಕ್ಷ ನಡೆಸಿ ಭಾನೆತ್ತರಕ್ಕೆ ಸಿಡಿಮದ್ದು ಸಿಡಿಸಿ ರಥಾರೋಹಣ ಪೂಜೆ ಅರ್ಪಿಸಲಾಗುತ್ತದೆ.
ಜ.25ರಂದು ಮುಂಜಾನೆ 4 ಗಂಟೆಗೆ ವಿಶೇಷ ಅಭಿಷೇಕ, ವಿಷ್ಣು ಸಹಸ್ರನಾಮ ಶಾತಮೊರೈ ಪೂಜೆಗಳೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಬಳಿಕ ಪಟ್ಟಣದ ರಾಜ ಬೀದಿಗಳಲ್ಲಿ ಸೂರ್ಯಮಂಡಲ ಮತ್ತು ಶೇಷಗಜಲಕ್ಷ್ಮಿ ತಿರುನಾಳ್ ರಥೋತ್ಸವಕ್ಕೆ ಚಾಲನೆ ನೀಡಲಿದ್ದು, ಸಹಸ್ರಾರು ಜನ ಪಾಲ್ಗೊಳ್ಳಲಿದ್ದಾರೆ.
ನಂತರ ದೇವಾಲಯದ ಆವರಣದಲ್ಲಿ ಪ್ರಧಾನ ಅರ್ಚಕ ವಿಜಯಸಾರಥಿ ಹಾಗೂ ಪ್ರಸನ್ನ ಅವರ ನೇತೃತ್ವದಲ್ಲಿ ವೈದ್ಧಿಕರ ತಂಡ ವಿಶೇಷ ಹೋಮ ನಡೆಸಲಿದ್ದು, ಯಾತ್ರದಾನ ಹಾಗೂ ಮಂಟಪೋತ್ಸವ ನೆರವೇರಿಸಲಿದೆ. ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಸಮೇತವಿರುವ ರತ್ನಖಚಿತ ಕಿರೀಟ ಧರಿಸಿರುವ ಶ್ರೀರಂಗನಾಥಸ್ವಾಮಿಯ ಪಂಚಲೋಹದ ವಿಶೇಷ ಉತ್ಸವ ಮೂರ್ತಿಯನ್ನು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಮಧ್ಯಾಹ್ನ 2.30ರ ಶುಭಲಗ್ನದಲ್ಲಿ ಆಕಾಶದಲ್ಲಿ ಗರುಡ ಪ್ರದಕ್ಷಿಣೆ ಹಾಕಿದ ಬಳಿಕ ಬೃಹತ್ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ಬ್ರಹ್ಮರಥೋತ್ಸವಕ್ಕೆ ಶ್ರೀರಂಗಪಟ್ಟಣ ಸೇರಿದಂತೆ ತಾಲೂಕು, ಜಿಲ್ಲೆ, ಮೈಸೂರು, ಬೆಂಗಳೂರು, ತುಮಕೂರು ಹಾಗೂ ಹೊರರಾಜ್ಯಗಳಾದ ನೆರೆಯ ಆಂಧ್ರ, ತಮಿಳುನಾಡು ಹಾಗೂ ಕೇರಳದಿಂದ ಅಂದು ಮುಂಜಾನೆಯೇ ಭಕ್ತರು ಆಗಮಿಸಿ ಜೀವನದಿ ಕಾವೇರಿ ನದಿಯಲ್ಲಿ ಮಿಂದು, ಕೆಲವರು ಮುಡಿಸೇವೆ ಅರ್ಪಿಸಿ ರಥಕ್ಕೆ ಹಣ್ಣು ಧವನ ಎಸೆದು ಭಕ್ತರಿಗೆ ಕೋಸಂಬರಿ, ಕಲ್ಲಂಗಡಿ, ಪಾನಕ ವಿತರಿಸಿ ತಮ್ಮ ಹರಕೆ ತೀರಿಸುತ್ತಾರೆ. 
ವಿಶೇಷ ವಸ್ತ್ರಗಳ ಅಲಂಕಾರ: 
ಶ್ರೀರಂಗನಾಥಸ್ವಾಮಿಯ ಬ್ರಹ್ಮರಥಕ್ಕೆ ವರ್ಣರಂಜಿತ ರೇಷ್ಮೆ ವಸ್ತ್ರಗಳನ್ನು ಅಲಂಕಾರಕ್ಕೆ ಬಳಸಲಾಗುತ್ತಿದೆ. ರಥೋತ್ಸವ ನಡೆಯುವ ದೇವಾಲಯದ ಸುತ್ತಲ ಪ್ರದೇಶ ಸೇರಿದಂತೆ ಶ್ರೀರಂಗನಾಥಸ್ವಾಮಿ ಮೈದಾನವನ್ನು ಈಗಾಗಲೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿ, ನೀರುಹಾಕಿ ಸುಸಜ್ಜಿತವಾಗಿ ಹಸನುಗೊಳಿಸಲಾಗಿದೆ. ಭಕ್ತರಿಗೆ ಶೌಚಗೃಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀರಂಗನಾಥಸ್ವಾಮಿ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಉಮಾ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net