

ಮಂಡ್ಯ: ಇತ್ತ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದರೆ, ಅತ್ತ ಆಕೆಯ ಪತಿ ಶವವಾಗಿ ಮನೆಗೆ ಮರಳಿದ ದಾರುಣ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಸೋಮಶೇಖರ್(28) ಮೃತ ದುರ್ದೈವಿ. ಕಳೆದ ಶುಕ್ರವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೋಮಶೇಖರ್ ಸ್ನೇಹಿತನ ಬರ್ತಡೇ ಪಾರ್ಟಿಗೆ ತೆರಳಿದ್ದ. ಈ ವೇಳೆ ನಾಲೆಯಲ್ಲಿ ಈಜುವಾಗ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ. ಇದರ ಬೆನ್ನಲ್ಲೇ ಸ್ನೇಹಿತರು ತಲೆ ಮರೆಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಸಾವಿನ ಬಳಿಕ ಶನಿವಾರ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ತರಲಾಗಿತ್ತು. ಅದೇ ಆಸ್ಪತ್ರೆಗೆ ಆತನ ಪತ್ನಿ ಹೆರಿಗೆಗಾಗಿ ದಾಖಲಾಗಿದ್ದಳು. ಹಠ ಹಿಡಿದು ಪತಿಯ ಶವ ನೋಡಿದ ಒಂದೇ ಗಂಟೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಅವಳಿ ಮಕ್ಕಳ ಹುಟ್ಟಿನಿಂದ ಸಂತೋಷದಲ್ಲಿ ತೇಲಾಡಬೇಕಿದ್ದ ಕುಟುಂಬಕ್ಕೆ ಸೋಮಶೇಖರ್ ಸಾವು ಬರಸಿಡಿಲು ಬಂಡಿದಂತಾಗಿದೆ. ಸೋಮಶೇಖರ್ ಸಾವಿನ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ನೇಹಿತರಿಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)