

ಮಂಡ್ಯ: ಚುನಾವಣಾ ವೇಳೆ ನಾನು ಹೋದಲ್ಲೆಲ್ಲಾ ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತುವಂತೆ ರೈತರು ಕೇಳಿಕೊಂಡಿದ್ದರು. ಹೀಗಾಗಿ ಕಾವೇರಿ ನೀರಿನ ಸಮಸ್ಯೆ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ನಾನು ಸಂಸತ್‌ನಲ್ಲಿ ಮಾತನಾಡಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಅವರು ಹೇಳಿದರು.
ಮನ್ಮುಲ್ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸುಮಲತಾ ಅವರು ಮಂಡ್ಯದ ನನ್ನ ಸ್ವಾಭಿಮಾನಿ ಜನಕ್ಕೆ ನನ್ನ ನಮಸ್ಕಾರ ಎನ್ನುತ್ತಾ ಕಳೆದ ಲೋಕಸಭಾ ಚುನಾವಣೆ ರೀತಿಯಲ್ಲೇ ಮಾತು ಆರಂಭಿಸಿದರು.
ಇವತ್ತು ಸುಮಲತಾ ಏನೇ ಮಾತನಾಡಿದರೂ ರಾಜಕೀಯ ಬಣ್ಣ ಕೊಡುವ ಕೆಲಸ ಆಗುತ್ತಿದೆ. ಅದರ ಬಗ್ಗೆ ನನಗೇನು ಬೇಜಾರು ಇಲ್ಲ. ಅವರ ಒಂದೆರೆಡು ಮಾತಲ್ಲಿ ನಿಜ ಒದೆ ಒಪ್ಪಿಕೊಳ್ಳೋಣ. ಸುಮಲತಾಗೆ ರಾಜಕೀಯ ಹೊಸದು, ಮಾಹಿತಿ ಕೊರತೆ ಇದೆ ಎನ್ನುತ್ತಾರೆ. ನಿಜ ನನಗೆ ರಾಜಕೀಯ ಹೊಸದೇ ಹಾಗೆಯೇ ಭ್ರಷ್ಟಾಚಾರನೂ ಕೂಡ ಹೊಸದೇ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.
ನಾನು ಸಿನಿಮಾರಂಗದಿಂದ ಬಂದವಳೆ, ಚಿತ್ರರಂಗದಲ್ಲಿ ಇದೆಲ್ಲಾ ಇರಲ್ಲ. ನನ್ನಲ್ಲಿ ತಪ್ಪಿದ್ದರೆ ಶಿಕ್ಷೆಗೆ ನಾನು ಸಿದ್ಧಳಾಗಿದ್ದೇನೆ. ಚುನಾವಣೆ ವೇಳೆ ನಾನು ಹೋದಲ್ಲೆಲ್ಲ ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತುವಂತೆ ರೈತರು ಹೇಳಿದ್ರು. ಕಾವೇರಿ ನೀರಿನ ಸಮಸ್ಯೆ, ಅಕ್ರಮ ಗಣಿಗಾರಿಕೆ ಬಗ್ಗೆ ನಾನು ಸಂಸತ್‌ನಲ್ಲಿ ಮಾತನಾಡಿದ್ದೇನೆ ಎಂದು ಸಮರ್ಥನೆ ನೀಡಿದರು. (ದಿಗ್ವಿಜಯ ನ್ಯೂಸ್)