

ಮಂಡ್ಯ: ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಮಲಗಿದ್ದಲ್ಲೇ ಸುಟ್ಟುಕರಕಲಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಪ್ರೇಮಾ(42) ಮೃತ ದುರ್ದೈವಿ. ಇವರ ಪತಿ ಶಿವಕುಮಾರ್ ಆರಾಧ್ಯ ಕೆಲ ದಿನಗಳ ಹಿಂದೆಯೇ ಮೃತಪಟ್ಟಿದ್ದಾರೆ. ಪತಿ ನಿಧನದ ನಂತರ ಮಾರಸಿಂಗನಹಳ್ಳಿ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ಒಂಟಿಯಾಗಿ ಪ್ರೇಮಾ ಜೀವನ ನಡೆಸುತ್ತಿದ್ದರು. ಪುತ್ರ ಬೆಂಗಳೂರಿನಲ್ಲಿ ವಾಸವಿದ್ದಾರೆ.
ನಿನ್ನೆ(ಸೋಮವಾರ) ರಾತ್ರಿ ಮನೆಯಲ್ಲಿ ಪ್ರೇಮಾ ಒಬ್ಬರೇ ಮಲಗಿದ್ದರು. ಬೆಳಗಾಗುವಷ್ಟರಲ್ಲಿ ಹಾಸಿಗೆ ಮೇಲೆಯೇ ಪ್ರೇಮಾ ಸಜೀವ ದಹನವಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿವೈಎಸ್ಪಿ ನವೀನ್ಕುಮಾರ್, ಸಿಪಿಐ ಮನೋಜ್, ಪಿಎಸ್ಐ ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಸಾವಿನ ಸುತ್ತ ಅನುಮಾನದ ಹುತ್ತ: ದುಷ್ಕರ್ಮಿಗಳು ಮನೆಗೆ ನುಗ್ಗಿ ಗಾಢ ನಿದ್ರೆಯಲ್ಲಿದ್ದ ಪ್ರೇಮಾ ಮೇಲೆ ಹಲ್ಲೆ ಮಾಡಿ ಹಾಸಿಗೆ ಮೇಲೆ ಸಜೀವ ದಹನ ಮಾಡಿದ್ದಾರೆ ಎನ್ನಲಾಗಿದೆ. ದೇಹದ ತಲೆ ಬಿಟ್ಟು ಉಳಿದ ಎಲ್ಲ ಭಾಗಗಳು ಸುಟ್ಟು ಕರಕಲಾಗಿವೆ. ಆ್ಯಸಿಡ್ ಎರಚಿ ದೇಹವನ್ನು ದಹನ ಮಾಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೇ ಅಥವಾ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗಿದೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾರೋ ದುಷ್ಕರ್ಮಿಗಳು ನನ್ನ ತಾಯಿಯನ್ನು ಸಜೀವನ ದಹನ ಮಾಡಿ ಮನೆಯಲ್ಲಿದ್ದ ಲ್ಯಾಪ್ಟ್ಯಾಪ್ ಮತ್ತು ಲಕ್ಷಾಂತರ ರೂ. ಬೆಲೆ ಬಾಳುವ ಬೆಳ್ಳಿ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನನ್ನ ತಾಯಿಯ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತಳ ಪುತ್ರ ಶ್ರೀಶೈಲ ಆರಾಧ್ಯ ದೂರು ನೀಡಿದ್ದಾರೆ. ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.