ಯಕ್ಷಗಾನ ಪ್ರಿಯೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಿ

manndarthi
Published on

ಕೊಕ್ಕರ್ಣೆ: ಬ್ರಹ್ಮಾವರದಿಂದ 18 ಕಿ.ಮೀ.ದೂರದಲ್ಲಿರುವ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಮನ್ಮಹಾರಥೋತ್ಸವ ಫೆ.10ರಿಂದ ತೊಡಗಿ 16ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.

ಫೆ.10ರಂದು ಬೆಳಗ್ಗೆ ಬಾರಾಳಿ ಶ್ರೀಮಹಾಗಣಪತಿ ಸನ್ನಿಧಿಯಲ್ಲಿ ಗಣಪತಿ ಹೋಮ, ರಾತ್ರಿ ಶ್ರೀಕ್ಷೇತ್ರದಲ್ಲಿ ವಿಘ್ನೇಶ್ವರ ಪ್ರಾರ್ಥನೆ, ರಂಗಪೂಜೆ. 11ರಂದು ರಾತ್ರಿ ವಿಶೇಷ ಪೂಜೆ, ರಂಗಪೂಜೆ, ಕಟ್ಟೆಪೂಜೆ, 12ರಂದು ರಾತ್ರಿ ರಂಗಪೂಜೆ, ಕಟ್ಟೆಪೂಜೆ, ವಸಂತಪೂಜೆ, 13ರಂದು ಕುಂಭ ಸಂಕ್ರಮಣ, ರಾತ್ರಿ ಕೆಂಡ ಸೇವೆ, ಹಾಲಿಟ್ಟು ಸೇವೆ, ನಾಗದರ್ಶನ, ಹಿರೇರಂಗಪೂಜೆ, ಬಲಿ ಉತ್ಸವ,ಢಕ್ಕೆಬಲಿ, 14ರಂದು ಮಧ್ಯಾಹ್ನ 12.30ರಿಂದ ಶ್ರೀಮನ್ಮಹಾರಥಾರೋಹಣ, ಸಂಜೆ ರಥೋತ್ಸವ, ಓಲಗ ಮಂಟಪ ಪೂಜೆ, ಶಯನೋತ್ಸವ, ಕವಾಟ ಬಂಧನ, 15ರಂದು ಬೆಳಗ್ಗೆ ಕವಾಟ ವಿಸರ್ಜನೆ, ಲಕ್ಷ್ಮೀ ಮಂಟಪ ಪೂಜೆ, ರಾತ್ರಿ ದೀಪೋತ್ಸವ, ರಂಗಪೂಜೆ, ಪಲ್ಲಕ್ಕಿ ಉತ್ಸವ, ಸುರ್ಗಿಕಟ್ಟೆ ಪೂಜೆ, ಬೀದಿ ಮತ್ತು ಕೆರೆ ದೀಪೋತ್ಸವ, ಓಲಗ ಮಂಟಪ ಪೂಜೆ, ಅಷ್ಟಾವಧಾನ ಸೇವೆಗಳು ಹಾಗೂ ಐದು ಮೇಳದವರಿಂದ ಯಕ್ಷಗಾನ ಸೇವೆ ಆಟ, 16ರಂದು ಸಂಪ್ರೋಕ್ಷಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಎಚ್.ಧನಂಜಯ್ ಶೆಟ್ಟಿ ತಿಳಿಸಿದ್ದಾರೆ.

ಕ್ಷೇತ್ರದ ಹಿನ್ನೆಲೆ

ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಿ ಯಕ್ಷಗನ ಪ್ರಿಯೆಯೂ ಹೌದು. ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರಕ್ಕೆ ಉತ್ವಸ ಸಂದರ್ಭದಲ್ಲಿ ಭಕ್ತರು ಸಲುಗಟ್ಟಿ ಆಗಮಿಸುತ್ತಾರೆ. ನಾಗಲೋಕದ ಶ್ರೀ ಶಂಖಚೂಡನೆಂಬ ನಾಗರಾಜನಿಗೆ ಮಹೇಶ್ವರನ ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐವರು ಹೆಣ್ಣು ಮಕ್ಕಳು ಮಹೇಶ್ವರನ ಮಗ ಸುಬ್ರಹ್ಮಣ್ಯ ಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕ ಸಹ್ಯಾದ್ರಿ ಪರ್ವತದ ಕಾಡ್ಗಿಚ್ಚಿನಲ್ಲಿ ಸಿಕ್ಕು ಪರಿತಪಿಸುತ್ತಿದ್ದರು. ವ್ಯಾಘ್ರಪಾದ ಮಹರ್ಷಿಗಳು ಸಹ್ಯಾದ್ರಿ ಪರ್ವತದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ಶಬ್ದಕ್ಕೆ ಹೌಹಾರಿದ ಮಹರ್ಷಿಗಳು ಗತಿಕುಂಠಿತವಾಗಿ ಬಿದಿರು ಮೆಳೆಗೆ ಸೀಮಿತವಾಗಿರುವಂತೆ ಶಪಿಸುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವುದೆಂದು ಮಹರ್ಷಿಗಳು ಹರಸಿದಂತೆ ಆವಂತಿಯ ರಾಜ ದೇವವರ್ಮನು ರಾಜ್ಯಭ್ರಷ್ಟನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗುವಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ, ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು.ಅವುಗಳಲ್ಲಿ ಮಂದರತಿಯಂಬ ಸರ್ಪವು ಸೇರಿದ ಜಾಗವೇ ಮಂದರತಿ ಕಾನನವೆಂಬ ಹೆಸರಾಯಿತು ಎಂದು ಕ್ಷೇತ್ರದ ಐತಿಹ್ಯವಿದೆ.

ಸೇವೆಗಳು

ದೇವಿಗೆ ದೇವಳದಲ್ಲಿ ನಿತ್ಯಪೂಜೆಯಿದೆ. ಇದಲ್ಲದೆ ವೈವಿಧ್ಯಮಯ ಸೇವೆಗಳು ಪ್ರತಿನಿತ್ಯ ಸಾಂಗವಾಗಿ ನೆರವೇರುತ್ತವೆ. ಹರಿವಾಣ ನೈವೇದ್ಯ, ಕುಂಕುಮಾರ್ಚನೆ, ಸಂತಾನ ಪ್ರಾಪ್ತಿಗಾಗಿ, ಮದುವೆ, ತುಲಾಭಾರ, ಬೆಳಕಿನ ಸೇವೆ, ರಂಗಪೂಜೆ, ಚಂಡಿಕಾ ಶಾಂತಿ,ದುರ್ಗಾಶಾಂತಿ, ಚಂಡಿಕಾ ಪಾರಾಯಣ ಮೊದಲಾದ ವಿಶೇಷ ಸೇವೆಗಳಲ್ಲದೆ ಪ್ರತಿ ಸಂಕ್ರಾಂತಿ, ನವರಾತ್ರಿಯಂದು ವಿಶೇಷ ಪೂಜೆಗಳು ನಡೆಯುತ್ತವೆ. ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆಯಿದೆ. ಉಚಿತ ಸಾಮೂಹಿಕ ವಿವಾಹ, ಉಚಿತ ಯಕ್ಷಗಾನ ತರಬೇತಿ ಮುಂತಾದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.

ಯಕ್ಷಗಾನ ಸೇವೆ

ಕ್ಷೇತ್ರದಲ್ಲಿ ಐದು ಯಕ್ಷಗಾನ ಮೇಳಗಳಿದ್ದು, ಕ್ಷೇತ್ರದ ಕಾರಣಿಕದಿಂದಾಗಿ 2042ರ ತನಕ ಬುಕ್ಕಿಂಗ್ ಇದೆ. ಬಾರಾಳಿ ಮಹಾಗಣಪತಿ ದೇವಸ್ಥಾನದಲ್ಲಿ ಕಲಾವಿದರು ಗೆಜ್ಜೆ ಕಟ್ಟುವುದರೊಂದಿಗೆ ಸೇವೆಗೆ ಚಾಲನೆ ದೊರೆಯುತ್ತದೆ.

ಉಚಿತ ಸಾಮೂಹಿಕ ವಿವಾಹ

ಶ್ರೀಕ್ಷೇತ್ರದಲ್ಲಿ 22ನೇ ವರ್ಷದ ಸಾಮೂಹಿಕ ವಿವಾಹ(ಮಾಂಗಲ್ಯ ಭಾಗ್ಯ)ವು ಏಪ್ರಿಲ್ 4 ರಂದು ಜರುಗಲಿರುವುದು. ಸರ್ಕಾರದ ಆದರ್ಶ ವಿವಾಹ ಯೋಜನೆಯಡಿ ಸಾಮೂಹಿಕ ವಿವಾಹದಲ್ಲಿ ಮದುವೆಯಾದ ವಧುವಿಗೆ ದೊರೆಯುವ ಪ್ರೋತ್ಸಾಹ ಧನ ಪಡೆಯಲು ಅನುಕೂಲವಾಗುವಂತೆ ಆ ದಿನವೇ ವಿವಾಹ ನೋಂದಣಿಗೆ ಕ್ರಮ ತೆಗೆದುಕೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net