ಶ್ರೀಲಕ್ಷ್ಮೀದೇವಿ ದೇಗುಲದಲ್ಲಿ ಮಂಡಲ ಪೂಜೆ ಸಮಾಪ್ತಿ

Oplus_0
Oplus_0
Published on

ಚನ್ನರಾಯಪಟ್ಟಣ: ತಾಲೂಕಿನ ಡಿ.ಕಾಳೇನಹಳ್ಳಿಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀಲಕ್ಷ್ಮೀದೇವಿ ಅಮ್ಮನವರ ದೇವಾಲಯದ 48 ದಿನ ಕೈಗೊಂಡ ವಿವಿಧ ಪೂಜಾ ಕಾರ್ಯಗಳು ಸಮಾಪ್ತಿಗೊಂಡ ಹಿನ್ನೆಲೆಯಲ್ಲಿ ಅಂತಿಮ ದಿನವಾದ ಬುಧವಾರ ಹೋಮ, ಹವನಾದಿಗಳನ್ನು ನಡೆಸಿ, ಕಳಸಾಭಿಷೇಕ ನೆರವೇರಿಸಲಾಯಿತು.


ಡಿ.ಕಾಳೇನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀಲಕ್ಷ್ಮೀದೇವಿ ಅಮ್ಮನವರ ದೇವಸ್ಥಾನ ಶತಮಾನಗಳಷ್ಟು ಹಳೆಯದಾಗಿ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಜೀರ್ಣೋದ್ಧಾರಗೊಳಿಸಿದ ನೂತನ ದೇವಾಲಯದ ವಿಗ್ರಹ ಪ್ರತಿಷ್ಠಾಪನೆ, ಶಿಖರ ಗೋಪುರ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮಗಳನ್ನು ನಡೆಸಿ 48 ದಿನಗಳು ಗ್ರಾಮದಲ್ಲಿ ದೇವಿಗೆ ಪ್ರತಿದಿನ ಅಭಿಷೇಕ, ಪೂಜೆ, ಅಲಂಕಾರ, ಮಹಾಮಂಗಳಾರತಿ ತರುವಾಯ ಅನ್ನಸಂತರ್ಪಣೆ ನಡೆಸಲಾಯಿತು.
48 ದಿನಗಳ ಮಂಡಲ ಪೂಜೆ ಮುಗಿದ ಹಿನ್ನೆಲೆಯಲ್ಲಿ ಬೆಳಗ್ಗೆ ದೇವಸ್ಥಾನ ಶುದ್ಧಿ ತರುವಾಯ, ದೃಷ್ಟಿ ನಿವಾರಣೆ, ಮಹಾಗಣಪತಿ ಪೂಜೆ, ಪುಣ್ಯಾಹ, ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಬೆಳ್ಳಿ ಕವಚ ಧಾರಣೆ, ಕುಂಕುಮಾರ್ಚನೆ ಸಲ್ಲಿಸಿ ಮಹಾನೈವೇದ್ಯ, ಅಷ್ಠಾವಧಾನ ಸೇವೆ ಸಲ್ಲಿಕೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.


ಆವರಣದಲ್ಲಿ ಹೋಮ ನಡೆಸಲಾಯಿತು, ಹೋಮದ ಪೂರ್ಣಾಹುತಿಯನ್ನು ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥರಾದ ಶ್ರೀಚಂದ್ರಶೇಖರ್ ಗುರೂಜಿ ನೆರವೇರಿಸಿದರು.


ಐವರು ಮುತ್ತೈದೆಯರು ಪೂರ್ಣಕುಂಭ ಕಳಸ ಹೊತ್ತು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ, ತರುವಾಯ ದೇವಸ್ಥಾನದ ಮೇಲೆ ಸ್ಥಾಪಿಸಲಾಗಿದ್ದ ಕಳಸಕ್ಕೆ ಮಹಿಳೆಯರು ಹೊತ್ತಿದ್ದ ಪೂರ್ಣ ಕುಂಭಗಳಿಂದ ಚಂದ್ರಶೇಖರ್ ಗುರೂಜಿಯವರಿಂದ ಅಭಿಷೇಕ ನೆರವೇರಿಸಲಾಯಿತು.
ಪೂಜಾ ವಿಧಿವಿಧಾನವನ್ನು ವೇದಬ್ರಹ್ಮ ಬಾಲಕೃಷ್ಣ ಭಟ್ಟರು ಮತ್ತವರ ತಂಡ ನಡೆಸಿ ಕೊಟ್ಟಿತು. ಗ್ರಾಪಂ ಸದಸ್ಯ ಕೆ.ಎನ್.ನಾಗೇಶ್ ಎಲ್ಲ ಧಾರ್ಮಿಕ ಕಾರ್ಯಕಗಳ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net