ಕೋತಿ ಆಂಜನೇಯಸ್ವಾಮಿ ದೇಗುಲದಿಂದಲೇ ಪ್ರಖ್ಯಾತಿ ಪಡೆದ ಮಂಚನಾಯ್ಕನಹಳ್ಳಿ

16-bidadi-3
Published on

ಚೇತನ್ ಚಕ್ಕೆರೆ ಬಿಡದಿ

ಒಂದೊಂದು ಗ್ರಾಮದ ಉದಯದ ಹಿಂದೆ ಒಂದೊಂದು ಇತಿಹಾಸ ಇದೆ. ನೂರಾರು ವರ್ಷಗಳ ಹಿಂದೆ ಗ್ರಾಮದ ಉದಯಕ್ಕೆ ಒಂದೊಂದು ಘಟನೆ ಕಾರಣವಾಗಿರುತ್ತದೆ. ಅದೇ ರೀತಿ ಇಲ್ಲೊಂದು ಗ್ರಾಮಕ್ಕೆ ಬಹಳ ವಿಶೇಷ ಇತಿಹಾಸ ಇದೆ. ಬಿಡದಿಯ ಹನುಮಂತನಗರದ ಹಿಂದೆ ಅಂಥದೊಂದು ರೋಚಕ ವಿಚಾರ ಇದೆ.

ಹೌದು... ಇಲ್ಲಿ ಕೋತಿಗಳನ್ನು ಆಂಜನೇಯಸ್ವಾಮಿಯ ಪ್ರತಿರೂಪ ಎಂದು ಕರೆಯಲಾಗುತ್ತದೆ. ಕೋತಿಗಳಿಗೆ ಯಾರೂ ನೋವುಂಟು ಮಾಡುವುದಕ್ಕೆ ಹೋಗುವುದಿಲ್ಲ. ಕೋತಿಗಳಿಗೆ ನೋವುಂಟು ಮಾಡಿದರೆ ಆಂಜನೇಯಸ್ವಾಮಿಗೆ ನೋವುಂಟು ಮಾಡಿದಂತೆ ಎಂಬ ನಂಬಿಕೆ ಜನರದ್ದು. ಇಂತಹ ನಂಬಿಕೆ ಹಿನ್ನೆಲೆಯಲ್ಲಿ ನೂರಾರು ಕೋತಿಗಳನ್ನು ಸಮಾಧಿ ಮಾಡಿರುವ ಘಟನೆ ನಡೆದಿರುವುದು ಇದೇ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಪಕ್ಕದಲ್ಲಿನ ಹನುಮಂತನಗರದಲ್ಲಿ.

ಗ್ರಾಮದ ಇತಿಹಾಸ:

ನೂರಾರು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಸಾಕಷ್ಟು ತೆಂಗಿನ ತೋಟಗಳಿದ್ದವು. ಈ ತೋಟದಲ್ಲಿ ನೂರಾರು ಕೋತಿಗಳು ವಾಸವಿದ್ದವು. ಸುತ್ತಮುತ್ತ ಜನರು ಬೆಳೆದ ಬೆಳೆಗಳನ್ನು ಕೋತಿಗಳು ಹಾಳು ಮಾಡುತ್ತಿದ್ದವು. ಕೋತಿಗಳಿಂದ ಬೇಸತ್ತ ಓರ್ವ ಕೋತಿಗಳಿಗೆ ವಿಷ ಹಾಕಿ ಮಾರಣ ಹೋಮ ಮಾಡಿದ್ದರು. ಕೊನೆಗೆ ಆ ಜಾಗದಲ್ಲಿ ಅಷ್ಟ್ಟೂ ಕೋತಿಗಳ ಸಮಾಧಿ ಮಾಡಲಾಯಿತು. ತದನಂತರ ಆ ಸ್ಥಳದಲ್ಲಿ ಅಪಘಾತ ಹೆಚ್ಚಾಗಲು ಶುರುವಾಯಿತು. ಯಾರೋ ಒಬ್ಬ ವ್ಯಕ್ತಿ ಮಾಡಿದ ತಪ್ಪಿನಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಯಿತು. ಕೊನೆಗೆ ಊರಿನ ಮುಖ್ಯಸ್ಥರು ಸೇರಿ ಕೋತಿಗಳನ್ನು ಸಮಾಧಿ ಮಾಡಿದ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಲು ಶುರುಮಾಡಿದರು. ಯಾವಾಗ ದೇವಾಲಯ ನಿರ್ಮಾಣವಾಗಲು ಪ್ರಾರಂಭವಾಯಿತೋ, ಅಂದಿನಿಂದಲೇ ಅಪಘಾತಗಳು ಕ್ರಮೇಣ ಕಡಿಮೆಯಾಗುತ್ತಾ ಬಂತು. ಹಾಗಾಗಿ ಹನುಮಂತನಗರ ಎಂಬ ಹೆಸರು ಬಂತು ಎಂದು ಇತಿಹಾಸ ಹೇಳುತ್ತದೆ.

ಹನುಮಂತನ ದೇವಾಲಯ:

ಬೆಂಗಳೂರು-ಮೈಸೂರು ಹೆದ್ದಾರಿಯ ಹನುಮಂತನಗರದಲ್ಲಿ ಇರುವ ದೇವಾಲಯವೆ ವೀರಾಂಜನೇಯ ಸ್ವಾಮಿ ದೇವಸ್ಥಾನ. ಈ ದೇವಸ್ಥಾನವು ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯ ಎಂದು ಪ್ರಖ್ಯಾತಿ ಪಡೆದುಕೊಂಡಿದೆ. ದೇವರ ಮೂರ್ತಿಯು ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡಿರುವುದು ಈ ದೇವಾಲಯದ ವಿಶೇಷ. ಅಮಾವಾಸ್ಯೆ ದಿನದಂದು ಹೆಚ್ಚಿನ ಪ್ರಮಾಣದಲ್ಲಿ ಹೊಸ ವಾಹನಗಳ ಪೂಜೆಯು ಈ ದೇವಾಲಯದಲ್ಲಿ ನೆರವೇರುತ್ತದೆ. ಕೆಲವು ವಿಚಿತ್ರ ಸಮಸ್ಯೆಗಳಿಂದ ಬಳಲುವ ಅನೇಕರು ಬಂದು ಹರಕೆ ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಸಮಸ್ಯೆ ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ.

ವಾಹನ ನಿಲ್ಲಿಸಿ ಕೈ ಮುಗಿಯುವ ಭಕ್ತರು

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು, ವಾಹನಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಬಂದು ಕೈಮುಗಿದು ಪೂಜೆ ಸಲ್ಲಿಸುತ್ತಾರೆ. ಇದರ ಜತೆಗೆ ಇನ್ನೊಂದು ವಿಶೇಷತೆ ಏನೆಂದರೆ ಯಾವುದೇ ಹೊಸ ವಾಹನ ಖರೀದಿಸಿದ ಮಂದಿ ವಾಹನದ ಮೊದಲ ಪೂಜೆಯನ್ನು ಇಲ್ಲಿಯೇ ಮಾಡಿಸುತ್ತಾರೆ. ರಾಮನಗರ, ಬೆಂಗಳೂರು, ಮೈಸೂರು ಸೇರಿ ಹೊರ ರಾಜ್ಯಗಳಿಂದಲೂ ವಾಹನ ಪೂಜೆಗೆ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ರಾಜ್ಯದಲ್ಲೆ ಹೆಸರು ಮಾಡಿರುವ ಗ್ರಾಪಂ

ಇದೇ ಗ್ರಾಮದಲ್ಲಿ ರಾಜ್ಯದಲ್ಲೆ ಹೆಚ್ಚು ಕರವಸೂಲಿ ಮಾಡುವ ಗ್ರಾಮ ಪಂಚಾಯಿತಿ ಕಚೇರಿ ಇದೆ. ದೇವಾಲಯದ ಪಕ್ಕದಲ್ಲೆ ಈ ಗ್ರಾಮ ಪಂಚಾಯಿತಿ ಕಚೇರಿ ಇರುವುದು ಈ ಗ್ರಾಮಕ್ಕೆ ಮತ್ತೊಂದು ಗರಿ. ಮಂಚನಾಯಕನಹಳ್ಳಿ ಗ್ರಾಪಂ ರಾಜ್ಯದಲ್ಲೆ ಹೆಚ್ಚು ಹೆಸರು ಮಾಡಿದೆ.

ಕೋಟಿ ವೆಚ್ಚದಲ್ಲಿ ಜಿರ್ಣೋದ್ದಾರ

ಈ ಹಿಂದೆ ಇದ್ದ ಹಳೆಯ ದೇವಾಲಯದ ಹಿಂಭಾಗದಲ್ಲಿ ವರ್ಣ ರಂಜಿತವಾದ ನೂತನ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 7 ರಿಂದ 8 ಕೋಟಿ ರೂ. ವೆಚ್ಚದಲ್ಲಿ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ದೇವಾಲಯದ ಗರ್ಭಗುಡಿ ನಿರ್ಮಾಣವಾಗಿದೆ. ಇದರ ಮೇಲೆ 25 ಅಡಿಯ ವಿಮಾನ ಗೋಪುರ, ಇದರ ಎಡ ಬಲದಲ್ಲಿ 18 ಅಡಿಗಳ ಎರಡು ವಿಮಾನ ಗೋಪುರ ನಿರ್ಮಾಣವಾಗುತ್ತಿವೆ. ತಮಿಳುನಾಡಿನ ಹೊಸೂರು ಮೂಲದ ನುರಿತ ಶಿಲ್ಪಿಗಳ ಕೈಚಳಕದಿಂದ ದೇವಾಲಯ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಇದಲ್ಲದೆ 54 ಅಡಿಯ ರಾಜಗೋಪುರ ನಿರ್ಮಾಣ ಮಾಡಲು ನೀಲಿ ನಕ್ಷೆ ಸಿದ್ದವಾಗುತ್ತಿದೆ. ಈ ದೇವಾಲಯ ಉದ್ಘಾಟನೆಗೊಂಡರೆ ಹನುಮಂತನಗರದ ಹಿರಿಮೆ ಮತ್ತಷ್ಟು ಬದಲಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net