

ರಟ್ಟಿಹಳ್ಳಿ: ರಾಣೆಬೆನ್ನೂರಿನಿಂದ ಶಿಕಾರಿಪುರಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್ನಲ್ಲಿ ಪ್ರಯಾಣಿಕರೊಬ್ಬರ ಸೈಕಲ್ ಟಯರ್ಗೆ 5 ರೂಪಾಯಿ ಲಗೇಜ್ ಶುಲ್ಕ ಆಕರಿಸಿದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ತೋಟಗಂಟಿ ಗ್ರಾಮದ ಉಮೇಶ ಪಾಟೀಲ ಅವರು ಮಗನೊಂದಿಗೆ ರಾಣೆಬೆನ್ನೂರಿನಿಂದ ರಟ್ಟಿಹಳ್ಳಿ ಮಾರ್ಗವಾಗಿ ಶಿಕಾರಿಪುರಕ್ಕೆ ಹೊರಟಿದ್ದ (ಕೆಎ 42 ಎಫ್ 1237) ಬಸ್ನಲ್ಲಿ ರಟ್ಟಿಹಳ್ಳಿಗೆ ಎರಡು ಟಿಕೆಟ್ ಪಡೆದಿದ್ದಾರೆ. ಓರ್ವ ಪ್ರಯಾಣಿಕನಿಗೆ 35 ರೂ. ಟಿಕೆಟ್ ದರವಿದೆ.
ಇಬ್ಬರಿಂದ 70 ರೂ. ಮತ್ತು ಸೈಕಲ್ ಟಯರ್ಗೆ 5 ರೂ. ಸೇರಿ 75 ರೂ. ಟಿಕೆಟ್ ಅನ್ನು ನಿರ್ವಾಹಕ ನೀಡಿದ್ದಾನೆ. ಕೈಯಲ್ಲಿ ಹಿಡಿದುಕೊಂಡಿದ್ದ ಸೈಕಲ್ ಟಯರ್ಗೆ ಏಕೆ ಲಗೇಜ್ ಹಣ ನೀಡಬೇಕು ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.
ಆದರೆ, ಇದಕ್ಕೆ ಬಗ್ಗದ ನಿರ್ವಾಹಕ ನಮಗೆ ಹೊಸ ಆದೇಶ ಬಂದಿದೆ. ಟಯರ್ಗೆ ಲಗೇಜ್ ಹಣ ನೀಡಲೇಬೇಕು ಎಂದು ತಿಳಿಸಿದ್ದಾರೆ. ನಿರ್ವಾಹಕನ ಕ್ರಮಕ್ಕೆ ಸಹ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರ ಸಣ್ಣಪುಟ್ಟ ಸಾಮಾನುಗಳಿಗೆ, ಬ್ಯಾಗ್ಗಳಿಗೆ ಲಗೇಜ್ ಹಣ ಪಡೆಯುವ ಅಗತ್ಯವಿಲ್ಲ, 1 ಯೂನಿಟ್ (15 ಕೆಜಿ)ಗೆ ಲಗೇಜ್ ಹಣ ವಿಧಿಸಬಹುದು. ಸೈಕಲ್ ಟಯರ್ಗೆ ಲಗೇಜ್ ಪಡೆಯಬಾರದಿತ್ತು. ಕೆಲ ನಿರ್ವಾಹಕರು ವಿಚಿತ್ರ ಮನಸ್ಥಿತಿಯಲ್ಲಿದ್ದು, ಈ ಬಗ್ಗೆ ನಿರ್ವಾಹಕರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಈ ಘಟನೆಗೆ ಸಂಬಂಧಿಸಿದಂತೆ ನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗುವುದು. - ಶಿವಮೂರ್ತಿ ಘಟಕ ವ್ಯವಸ್ಥಾಪಕ ರಾಣೆಬೆನ್ನೂರ