

ಪಡುಬಿದ್ರಿ(ಉಡುಪಿ): ಸಂಭ್ರಮ ಸಡಗರದ ನಾಗರ ಪಂಚಮಿ ಪ್ರಯುಕ್ತ ದ.ಕ, ಉಡುಪಿ ಜಿಲ್ಲೆಯಾದ್ಯಂರ ಭಕ್ತರು ನಾಗಬನಗಳಲ್ಲಿ ನಾಗಶಿಲೆಗಳಿಗೆ ಹಾಲು, ಸೀಯಾಳ ಎರೆಸಿ ನಾಗಾರಾಧನೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇಲ್ಲೊಬ್ಬರು ಜೀವಂತ ಸರ್ಪಕ್ಕೆ ಪೂಜೆ ನೆರವೇರಿಸಿ ಸುದ್ದಿಯಾಗಿದ್ದಾರೆ.
ಕಾಪು ಮಜೂರು ಮಲ್ಲಾರಿನ ಗೋವರ್ಧನ್ ಭಟ್ ಜೀವಂತ ಹಾವಿಗೆ ನಾಗರ ಪಂಚಮಿಯಂದು ಪೂಜೆ ಸಲ್ಲಿಸಿದರು. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಮತ್ತು ಕೆಟರಿಂಗ್ ಉದ್ಯಮ ನಡೆಸುತ್ತಿರುವ ಅವರು, ಕಾಪು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಘಾತ, ಪ್ರಾಣಿಗಳ ದಾಳಿಯಿಂದಾಗಿ ಗಾಯಗೊಳ್ಳುವ ಮತ್ತು ಅಸ್ವಸ್ಥಗೊಂಡ ನಾಗರ ಹಾವುಗಳನ್ನು ಮನೆಗೆ ತಂದು ಶುಶ್ರೂಷೆ ನೀಡುತ್ತಿರುತ್ತಾರೆ. ಗುಣಮುಖಗೊಂಡ ಹಾವುಗಳನ್ನು ಮರಳಿ ಕಾಡು ಅಥವಾ ಬನಕ್ಕೆ ಬಿಡುವ ಉರಗ ಪ್ರೇಮ ಮೈಗೂಡಿಸಿಕೊಂಡಿದ್ದಾರೆ.
ಪ್ರತಿ ವರ್ಷವೂ ಆರೈಕೆಯಲ್ಲಿರುವ ಹಾವುಗಳಿಗೆ ನಾಗರಪಂಚಮಿಯಂದು ಪೂಜೆ ಸಲ್ಲಿಸುವ ಅವರು, ಈ ಬಾರಿ ಗಾಯಗೊಂಡು ಆರೈಕೆಯಲ್ಲಿದ್ದ ಎರಡು ಹಾವುಗಳಿಗೆ ಪೂಜೆ ಸಲ್ಲಿಸಿದ್ದು, ಅವರು ನಡೆಸುವ ನಾಗಾರಾಧನೆಗೆ ಮನೆ ಮಂದಿಯೂ ಕೈಜೋಡಿಸಿ ಭಕ್ತಿ ಮೆರೆದಿದ್ದಾರೆ.