

ಉಡುಪಿ: ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯ ನಾಗರಪಂಚಮಿ ಆಚರಣೆ ನಡೆಯಿತು. ಭಕ್ತರು ವಿವಿಧ ದೇವಾಲಗಳಲ್ಲಿರುವ ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಿಗೆ ತೆರಳಿ ನಾಗನ ಕಲ್ಲಿಗೆ ಹಾಲು ಅರಸಿನ ತುಪ್ಪ ಜೇನು-ಸಿಯಾಳದಿಂದ ಅಭಿಷೇಕ ಮಾಡಿದರು.
ಶ್ರೀ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು. ಉಡುಪಿಯ 4 ಪ್ರಮುಖ ನಾಗಸನ್ನಿಧಿಗಳಾದ ತಾಂಗೋಡು, ಮಾಂಗೋಡು, ಮುಚ್ಲಕೋಡು, ಅರಿತೋಡು ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ತನು-ತಂಬಿಲ ಅರ್ಪಿಸಿದರು. ಕಡೆಕಾರ್ ಶ್ರೀ ಲಕ್ಷಿ$್ಮನಾರಾಯಣ ಮಠ ಶ್ರೀನಾಗ ದೇವರ ಗುಡಿಯಲ್ಲಿ, ದೊಡ್ಡಣಗುಡ್ಡೆ ಸಗ್ರಿಯ ನೈಸರ್ಗಿಕ ನಾಗಬನ, ಮಣಿಪಾಲ ಮಂಚಿಕರೆಯ ನಾಗಬನ, ಕೊಡವೂರು ಶಂಕರನಾರಾಯಣ ದೇವಳದ ನಾಗಕಟ್ಟೆ, ಕಲ್ಸಂಕ ಗುಂಡಿಬೈಲು ನಾಗಬ್ರಹ್ಮ ಸ್ಥಾನ ಸೇರಿದಂತೆ ಮೊದಲಾದ ಕಡೆಗಳಲ್ಲಿ ನಾಗರಪಂಚಮಿ ವಿಶೇಷ ಪೂಜೆ ನಡೆಯಿತು.
ವರುಣ ಕೃಪೆ
ಸೋಮವಾರ ಜಿಲ್ಲೆಯಾದ್ಯಂತ ಬಿಸಿಲಿನ ವಾತಾವರಣವಿದ್ದ ಕಾರಣ ದೂರದ ಊರಿನಿಂದ ಮೂಲಸ್ಥಾನಗಳಿಗೆ ತೆರಳುವ ಭಕ್ತರಿಗೆ ಅನುಕೂಲವಾಯಿತು. ಅಂಗಡಿಗಳಲ್ಲಿ ದೇವರಿಗೆ ಹೂ, ಹಣ್ಣು ಖರೀದಿ ಭರಾಟೆ ಜೋರಾಗಿತ್ತು. ಹೊರ ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಿಗಳು ನಗರದ ವಿವಿಧೆಡೆ ಟೆಂಟ್ ಹಾಕಿ ಕೇದಗೆ, ಸಿಂಗಾರ ಹೂವು, ಸೀ-ಯಾಳ, ಕೆಂದಾಳೆ ಮಾರಾಟದಲ್ಲಿ ತೊಡಗಿದ್ದರು.