ಡಿಕ್ಕಿಯಲ್ಲಿ ಅವಿತು ಕುಳಿತು ದರೋಡೆಗೆ ಯತ್ನ! ಖತರ್ನಾಕ್ ಗ್ಯಾಂಗ್​ನ ಓರ್ವ ಸದಸ್ಯನನ್ನು ಹಿಡಿದ ಪೊಲೀಸರು

car
Published on

ಬೆಂಗಳೂರು: ಕಾರಿನ ಡಿಕ್ಕಿಯಲ್ಲಿ ಅವಿತು ಕುಳಿತು ಪ್ರಯಾಣಿಕರ ದರೋಡೆಗೆ ಯತ್ನಿಸಿದ ಗ್ಯಾಂಗ್‌ನ ಓರ್ವ ಸದಸ್ಯ ಬಾಗಲೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ. ದೆಹಲಿ ಮೂಲದ ಕರ್ನಲ್ ಬಹದ್ದೂರ್ ಯಾದವ್ (26) ದರೋಡೆಗೆ ಒಳಗಾದವರು.

ಬಹದ್ದೂರ್ ಯಾದವ್ ನಗರದ ಕಬ್ಬನ್ ರಸ್ತೆಯಲ್ಲಿರುವ ಕರ್ನಾಟಕ ಆ್ಯಂಡ್ ಕೇರಳ ಸಬ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಊರಾದ ದೆಹಲಿಗೆ ಹೋಗಿ ಗುರುವಾರ ರಾತ್ರಿ 8 ಗಂಟೆಗೆ ದೆಹಲಿಯಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಿಮಾನ ನಿಲ್ದಾಣದಿಂದ ಓಲಾ ಕ್ಯಾಬ್‌ವೊಂದನ್ನು ಬುಕ್ ಮಾಡಿ ಶಿವಾಜಿನಗರದಲ್ಲಿರುವ ಕೆ ಆ್ಯಂಡ್‌ ಕೆ ಸಬ್ ಏರಿಯಾ ಹೆಡ್ ಕ್ವಾಟರ್ಸ್‌ಗೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದರು. ಕ್ಯಾಬ್ ಚಾಲಕ ಏರ್‌ಪೋರ್ಟ್‌ನಿಂದ ಟೋಲ್ ರಸ್ತೆಯಲ್ಲಿ ಹೋಗದೇ ಬೇಗೂರು ವೃತ್ತದ ಬಳಿ ಒಳತಿರುವು ಪಡೆದು ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದ. ಯಾದವ್ ಈ ಬಗ್ಗೆ ಚಾಲಕನನ್ನು ಪ್ರಶ್ನಿಸಿದಾಗ ಡಿಕ್ಕಿಯಲ್ಲಿ ಶಬ್ದ ಬರುತ್ತಿದೆ. ಪರಿಶೀಲಿಸಿ ಬರುವುದಾಗಿ ಹೇಳಿ ಕಾರಿಂದ ಕೆಳಗಿಳಿದು ಡಿಕ್ಕಿ ತೆರೆದಾಗ ಡಿಕ್ಕಿಯೊಳಗೆ ಅವಿತು ಕುಳಿತಿದ್ದ ಇಬ್ಬರು ಚೂರಿ ಹಿಡಿದುಕೊಂಡು ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಕರ್ನಲ್ ಅಕ್ಕ-ಪಕ್ಕದಲ್ಲಿ ಕುಳಿತು ಹಣ ಕೊಡುವಂತೆ ಬೆದರಿಸಿದ್ದರು. ಹಣ ಕೊಡದೇ ಇದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದರು.

ಹೊಯ್ಸಳ ಕಂಡು ಓಡಿಹೋದರು:

ಯಾದವ್ ದರೋಡೆಕೋರರನ್ನು ತಳ್ಳಿ ಪರಾರಿಯಾಗಲು ಯತ್ನಿಸಿದಾಗ ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಹೊಯ್ಸಳ ವಾಹನ ಬಂದಿತ್ತು. ಅನುಮಾನಾಸ್ಪದವಾಗಿ ನಿಂತಿದ್ದ ಕ್ಯಾಬ್‌ನ್ನು ಗಮನಿಸಿದ ಪೊಲೀಸರು ಕ್ಯಾಬ್ ಬಳಿ ಬರುತ್ತಿದ್ದಂತೆ ಮೂವರು ದರೋಡೆಕೋರರೂ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆರೋಪಿಗಳ ಬೆನ್ನಟ್ಟಿದ ಪೊಲೀಸರು ಮೂವರ ಪೈಕಿ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದರೋಡೆಯ ಹಿಂದಿನ ರಹಸ್ಯ ಬೆಳಕಿಗೆ ಬಂದಿದೆ. ಸದ್ಯ ಬಾಗಲೂರು ಪೊಲೀಸರು ಕಾರನ್ನು ಜಪ್ತಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿಕ್ಕಿಯಲ್ಲಿ ಅವಿತು ಕುಳಿತಿದ್ದ ದರೋಡೆಕೋರರು:

ಕ್ಯಾಬ್ ಚಾಲಕ ಕಾರಿನಲ್ಲಿ ಬರುವ ಪ್ರಯಾಣಿಕರನ್ನು ದರೋಡೆ ಮಾಡಲು ಮೊದಲೇ ಸಂಚು ರೂಪಿಸಿದ್ದ. ಅದರಂತೆ ತನ್ನ ಇಬ್ಬರು ಸ್ನೇಹಿತರನ್ನು ಕಾರಿನ ಡಿಕ್ಕಿಯಲ್ಲಿ ಕೂರಿಸಿದ್ದ. 1 ಗಂಟೆಗಳ ಕಾಲ ಚಾಲಕನ ಇಬ್ಬರು ಸ್ನೇಹಿತರೂ ಡಿಕ್ಕಿಯಲ್ಲಿ ಅವಿತು ಕುಳಿತಿದ್ದರು. ದರೋಡೆ ಮಾಡಿ ಪ್ರಯಾಣಿಕರನ್ನು ಅರ್ಧದಾರಿಯಲ್ಲಿ ಬಿಟ್ಟು ಪರಾರಿಯಾಗಲು ಸಂಚು ರೂಪಿಸಿದ್ದಾಗಿ ಬಂಧನಕ್ಕೊಳಗಾಗಿರುವ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ತಲೆಮರೆಸಿಕೊಂಡಿರುವ ಇಬ್ಬರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net