ಸಹಜೀವನ ನಡೆಸುತ್ತಿದ್ದವಳನ್ನೇ ಕೊಂದವನಿಗೆ ಜೀವಾವಧಿ ಶಿಕ್ಷೆ

Published on

 ಚಿಕ್ಕಬಳ್ಳಾಪುರದ 3ನೇ ಎಡಿಜೆ ನ್ಯಾಯಾಲಯದಿಂದ ತೀರ್ಪು

ಚಿಕ್ಕಬಳ್ಳಾಪುರ: ಸಹ ಜೀವನ ನಡೆಸುತ್ತಿದ್ದ ಮಹಿಳೆಯನ್ನು ಒನಕೆಯಿಂದ ಹೊಡೆದು ಸಾಯಿಸಿದ್ದ ವ್ಯಕ್ತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದೆ. ಬಾಗೇಪಲ್ಲಿ ತಾಲೂಕಿನ ನಾರಾಯಣಸ್ವಾಮಿ ಕೋಟೆಯ ನರಸಮ್ಮ ಮೃತಳು. ಮಾಮಿಡಿಕಾಯಲಪಲ್ಲಿಯ ನಾಗರಾಜಪ್ಪ ಅಪರಾಧಿ. ಚಿಕ್ಕಬಳ್ಳಾಪುರದ 3ನೇ ಎಡಿಜೆ ನ್ಯಾಯಾಲಯವು ವಿಚಾರಣೆ ನಡೆಸಿ, ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ ದಂಡದ ಜತೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಕಳೆದ 4 ವರ್ಷಗಳ ಹಿಂದೆ ನರಸಮ್ಮಳ ಪತಿ ಮಾಮಿಡಿಕಾಯಲಪಲ್ಲಿಯ ಚಿನ್ನಗಂಗುಲಪ್ಪ ಅನಾರೋಗ್ಯದಿಂದ ಮೃತಪಟ್ಟಿದ್ದ. ಬಳಿಕ ಆಕೆ ಮಾಮಿಡಿಕಾಯಲಪಲ್ಲಿಯ ನಾಗರಾಜಪ್ಪನೊಂದಿಗೆ ಸಹ ಜೀವನ ನಡೆಸುತ್ತಿದ್ದಳು. ಇದರ ನಡುವೆ ಕಳೆದ 2024ನೇ ಏ.19ರಂದು ಕುಡಿಯಲು ಹಣ ಕೊಡದಿದ್ದ ಕೋಪದಲ್ಲಿ ಅಪರಾಧಿ, ಒನಕೆಯನ್ನು ತೆಗೆದುಕೊಂಡು ಹೊಡೆದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಳು ಎನ್ನಲಾಗಿದ್ದು, ಈ ಬಗ್ಗೆ ಮೃತಳ ಸಹೋದರ ಕೃಷ್ಣಪ್ಪ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಇನ್ಸ್‌ಸ್ಪೆಕ್ಟರ್ ಪ್ರಶಾಂತ್ ಆರ್.ವರ್ಣಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ 24 ಜನ ಸಾಕ್ಷಿಗಳನ್ನೊಳಗೊಂಡ ಚಾರ್ಶೀಟ್ ಸಲ್ಲಿಸಿದ್ದರು.

ವಿಧವೆಯರಿಂದ ಹಣ ಪಡೆದು ವಂಚಿಸುತ್ತಿದ್ದವನ ಬಂಧನಚಿಕ್ಕಬಳ್ಳಾಪುರ: ಮದುವೆ ಹೆಸರಿನಲ್ಲಿ ವಿಧವೆಯರಿಂದ ಹಣ ಪಡೆದು ವಂಚಿಸುತ್ತಿದ್ದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮಹಾದೇವಪುರ ಬ್ರಿಗೇಡ್ ಲೇಕ್ ಅಪಾರ್ಟ್‌ಮೆಂಟ್‌ನ ಇ.ಸುರೇಶ್ ನಾಯ್ಡು (61) ಬಂಧಿತ. ಈತ ವಿಧವೆಯರನ್ನು ಪರಿಚಯಿಸಿಕೊಂಡು ನಂತರ ಮದುವೆಯಾಗಿ ಆಶ್ರಯ ಕಲ್ಪಿಸುವುದಾಗಿ ಆಸೆ ಹುಟ್ಟಿಸುತ್ತಿದ್ದ. ಬಳಿಕ ನಯವಾಗಿ ಸಲುಗೆ ಬೆಳೆಸಿಕೊಂಡು ಕೊನೆಗೆ ಹಣ ಪಡೆದು ಕೈ ಕೊಡುತ್ತಿದ್ದ ಎನ್ನಲಾಗಿದ್ದು ಚಿಕ್ಕಬಳ್ಳಾಪುರ ನಗರ, ತಮಿಳುನಾಡು ಮೂಲದ ಮಲೇಷ್ಯಾ, ಯಶವಂತಪುರದ ಮಹಿಳೆ ಸೇರಿ ಹಲವರನ್ನು ವಂಚಿಸಿರುವ ಆರೋಪಗಳು ಸುರೇಶ್ ನಾಯ್ಡು ಮೇಲಿವೆ. ಸುರೇಶ್ ನಾಯ್ಡು ಅನೇಕ ಮಹಿಳೆಯರನ್ನು ವಂಚಿಸಿದ್ದಾನೆ. ಆದರೆ, ಚಿಕ್ಕಬಳ್ಳಾಪುರ ನಗರದ ಸಂತ್ರಸ್ತೆ ಮಾತ್ರ ದೂರು ಕೊಟ್ಟಿದ್ದಾರೆ. ಇದರ ವಿಚಾರಣೆ ನಡೆಸಿದ ಪೊಲೀಸರು ವಂಚನೆಯ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ಸುರೇಶ್ ನಾಯ್ಡು ಆನ್‌ಲೈನ್ ವಿವಾಹ ನೋಂದಣಿ ವೆಬ್ ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಅದರಲ್ಲಿ ವಿಧವೆಯರ ಪರಿಚಯ ಮಾಡಿಕೊಂಡು, ಸಲುಗೆ ಬೆಳೆಸಿಕೊಳ್ಳುತ್ತಿದ್ದ. ಹಾಗೆಯೇ ಚಿಕ್ಕಬಳ್ಳಾಪುರದ ಮಹಿಳೆಗೆ ಸುಳ್ಳು ಮಾಹಿತಿ ನೀಡಿದ್ದು, ಮದುವೆಯಾಗಿ ಹೊಸ ಜೀವನ ನೀಡುವುದಾಗಿ ನಂಬಿಸಿದ್ದಾನೆ. ಮೊದಲು ನಿವೇಶನ ಖರೀದಿಯ ಹೆಸರಿನಲ್ಲಿ 2.80 ಲಕ್ಷ ರೂ. ಪಡೆದುಕೊಂಡಿದ್ದಾನೆ. ಬಳಿಕ ಮೊಬೈಲ್ ಸಂಪರ್ಕ ಕಳೆದುಕೊಂಡಿದ್ದು, ಇದನ್ನು ಪ್ರಶ್ನಿಸಿದಾಗ ಮದುವೆಯಾಗುವುದಿಲ್ಲ ಎಂದುತ್ತರಿಸಿ ನುಣುಚಿಕೊಂಡಿದ್ದಾನೆ. ಈ ಬಗ್ಗೆ ಸಂತ್ರಸ್ತೆ ದೂರು ಕೊಟ್ಟಿದ್ದು, ಈತನಿಂದ ವಂಚನೆಗೊಳಗಾದ ಇತರರೂ ಈಗ ಠಾಣೆಯ ಮೆಟ್ಟಿಲೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net