

ಬೆಂಗಳೂರು:ಮುಂಬೈನಿಂದ ತೈವಾನ್ ದೇಶಕ್ಕೆ ಕೆಲವು ವಸ್ತುಗಳ ಅಕ್ರಮ ಪೂರೈಕೆಗೆ ನಿಮ್ಮ ಪಾಸ್‌ಪೋರ್ಟ್, ಆಧಾರ್ ಬಳಕೆಯಾಗಿದೆ ಎಂದು ಮುಂಬೈ ಡಿಸಿಪಿ ಸೋಗಿನಲ್ಲಿ ಟೆಕ್ಕಿವೊಬ್ಬರಿಗೆ ಸೈಬರ್ ವಂಚಕರು ಕರೆ ಮಾಡಿ ಬೆದರಿಸಿ 33.24 ಲಕ್ಷ ರೂ. ವಂಚಿಸಿರುವ ಪ್ರಕರಣ ನಡೆದಿದೆ.
ನಾಗನಾಥಪುರದ ನಿವಾಸಿ ದಿನೇಶ್ ಪಾಟಕ್ (39) ವಂಚನೆಗೊಳಗಾದ ಸ್‌ಟಾವೇರ್ ಇಂಜಿನಿಯರ್. ಜೂ. 27 ರಂದು ದಿನೇಶ್ ಪಾಟಕ್‌ಗೆ ಅಪರಿಚಿತ ನಂಬರ್‌ನಿಂದ ಕರೆಗಳು ಬಂದಿವೆ. ಈ ವೇಳೆ ತಾವು ಫೆಡ್ಎಕ್ಸ್ ಕೊರಿಯರ್‌ನವರು ಎಂದು ಪರಿಚಯಿಸಿಕೊಂಡ ವಂಚಕರು, ಮುಂಬೈನಿಂದ ತೈವಾನ್‌ಗೆ ಅಕ್ರಮವಾಗಿ ಮಾದಕವಸ್ತು ಎಂಡಿಎಂ, ಲ್ಯಾಪ್‌ಟಾಪ್, ಬಟ್ಟೆಗಳ ಪಾರ್ಸೆಲ್ ರವಾನಿಸಲು ನಿಮ್ಮ ಪಾಸ್ಪೋರ್ಟ್ ಮತ್ತು ಆಧಾರ್ ಬಳಕೆಯಾಗಿದೆ ಎಂದು ನಂಬಿಸಿದ್ದರು.
ಬಳಿಕ ನಿಮ್ಮ ಕರೆಯನ್ನು ಮುಂಬೈ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡುವುದಾಗಿ ತಿಳಿಸಿ ಅಪರಿಚಿತ ನಂಬರ್‌ಗೆ ಕರೆ ವರ್ಗಾಯಿಸಿದ್ದರು. ವಂಚಕರ ಮಾತನ್ನು ನಂಬಿದ್ದ ದಿನೇಶ್ ಮಾತು ಮುಂದುವರಿಸಿದ್ದರು.
ಕರೆಯಲ್ಲಿ ಮಾತನಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ತಾವು ಮುಂಬೈ ಡಿಸಿಪಿ ಎಂದು ಹೇಳಿಕೊಂಡು ಮಾತನಾಡಿದ್ದ. ನಿಮ್ಮ ಹೆಸರಲ್ಲಿ ಅಕ್ರಮವಾಗಿ ವಸ್ತುಗಳು ರವಾನೆಯಾಗಿವೆ. ಆದ್ದರಿಂದ ನಿಮ್ಮ ವಿರುದ್ಧ ಮನಿ ಲಾಂಡರಿಂಗ್ ಕೇಸ್ ದಾಖಲಾಗುತ್ತದೆ ಎಂದು ಬೆದರಿಸಿದ್ದ ಮೊಬೈಲ್‌ನಲ್ಲಿ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಲು ಸೂಚಿಸಿದ್ದರು.
ಇವರ ಮಾತು ಕೇಳಿ ಹೆದರಿದ ಟೆಕ್ಕಿ, ಸ್ಕೈಪ್ ಡೌನ್‌ಲೋಡ್ ಮಾಡಿದರು. ಬಳಿಕ ಸ್ಕೈಪ್‌ನಲ್ಲಿ ಕರೆ ಮಾಡಿದ ವಂಚಕರು, ವೆರಿಫಿಕೇಶನ್ ಮಾಡಬೇಕಾಗಿದೆ ಎಂದು ಹೇಳಿದ್ದ. ಅದನ್ನು ನಿಜವೆಂದು ನಂಬಿದ ದಿನೇಶ್ ಪಾಟಕ್, ವೆರಿಫಿಕೇಷನ್‌ಗಾಗಿ ತಮ್ಮ ಆಧಾರ್ ಕಾರ್ಡ್ ನಂಬರ್, ಫೋಟೊ, ಬ್ಯಾಂಕ್ ದಾಖಲೆಗಳನ್ನು ನೀಡಿದ್ದರು.
ಬಳಿಕ ವಂಚಕರು ತಾವು ಸೂಚಿಸುವ ಖಾತೆಗೆ ಹಣ ಹಾಕುವಂತೆ ತಿಳಿಸಿ, ನೀವು ಜಮೆ ಮಾಡುವ ಹಣ ನಿಮ್ಮ ಖಾತೆಗೆ ಮರುಪಾವತಿಸುವುದಾಗಿ ಹೇಳಿ ಹಂತ-ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 33.24 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದಾರೆ. ನಂತರ ಸಂಪರ್ಕಕ್ಕೆ ಸಿಗದೇ, ಹಣವನ್ನೂ ಮರುಪಾವತಿಸಿದೇ ವಂಚಿಸಿದ್ದಾರೆ.
ಬಳಿಕ ಪರಿಶೀಲಿಸಿದಾಗ ಇದು ಸೈಬರ್ ವಂಚಕರ ಕೈ ಚಳಕ ಎಂಬುದು ಗೊತ್ತಾಗಿದೆ. ತಾನು ಮೋಸ ಹೋಗಿರುವುದನ್ನು ಅರಿತ ದಿನೇಶ್ ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೈಬರ್ ವಂಚನೆಗಳ ಬಗ್ಗೆ ಜನರಲ್ಲಿ ಪೊಲೀಸರು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಕೂಡ ವಂಚನೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಅನಕ್ಷರಸ್ಥರಷ್ಟೇ ಅಲ್ಲ, ವಿದ್ಯಾವಂತರು ಕೂಡ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಈ ರೀತಿಯ ಸನ್ನಿವೇಶಗಳು ಎದುರಾದರೆ ಪೊಲೀಸರ ಸಹಾಯ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.