ತಾಯಿ, ಅಕ್ಕ, ಸೋದರಳಿಯ ಒಗ್ಗೂಡಿ ಬರ್ಬರವಾಗಿ ಕೊಂದರು; ಹಾಗಾದರೆ ಆತ ಮಾಡಿದ್ದಾದರೂ ಏನು?

Amaresh
ಕೊಲೆಗೀಡಾದ ಅಮರೇಶ (ಒಳಚಿತ್ರದಲ್ಲಿ ಆರೋಪಿಗಳು)
Published on

ರಾಯಚೂರು: ಇಲ್ಲೊಬ್ಬನ ಸಾವು ತಾಯಿ, ಅಕ್ಕ, ಸೋದರಳಿಯನಿಂದಲೇ ಆಗಿದೆ. ಅದೂ ಅಂತಿಂಥ ಕೊಲೆಯಲ್ಲ. ಈ ಮೂವರು ಆತನ ತಲೆಗೆ ಕೊಡಲಿಯಿಂದ ಹೊಡೆದು, ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಲ್ಲದೆ ಶವವನ್ನು ಮನೆಯಿಂದ ಹೊರಗೆಸೆದಿದ್ದರು.

ಹೀಗೆ ಬರ್ಬರವಾಗಿ ತನ್ನವರಿಂದಲೇ ಕೊಲೆಯಾಗಿ ಹೋದ ವ್ಯಕ್ತಿಯ ಹೆಸರು ಅಮರೇಶ (43). ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಈ ಭೀಕರ ಕೊಲೆ ನಡೆದಿದೆ. ಈ ಕೊಲೆ ಸಂಬಂಧ ಅಮರೇಶನ ತಾಯಿ ಲಕ್ಷ್ಮೀ, ಅಕ್ಕ ನಿರ್ಮಲಾ ಹಾಗೂ ಸೋದರ ಅಳಿಯ ಸಂತೋಷ್​​ನನ್ನು ಸಿರವಾರ ಪೊಲೀಸರು ಬಂಧಿಸಿದ್ದಾರೆ. ಅಮರೇಶನ ಪತ್ನಿ ಸೌಭಾಗ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಅಮರೇಶ ಮದ್ಯವ್ಯಸನಿಯಾಗಿದ್ದು, ಇಸ್ಪೀಟ್ ಚಟವನ್ನೂ ಹೊಂದಿದ್ದ. ಅಲ್ಲದೆ ಆತ ಕೆಲಸಕ್ಕೆ ಹೋಗದೆ ಪ್ರತಿದಿನ ಗಲಾಟೆ ಮಾಡುತ್ತಿದ್ದ. ಹೀಗೆ ಗಂಡ ದುಡಿಯಲ್ಲ ಎಂದು ಬೇಸತ್ತಿದ್ದ ಪತ್ನಿ ಸೌಭಾಗ್ಯ ತವರು ಮನೆಗೆ ಹೋಗಿದ್ದಳು. ಮದ್ಯ, ಇಸ್ಪೀಟ್ ಶೋಕಿಗೆ ಬಿದ್ದಿದ್ದ ಅಮರೇಶ್ ಬಹಳ ಸಾಲ ಮಾಡಿಕೊಂಡಿದ್ದ.

ಚಟಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸುವ ಸಲುವಾಗಿ ಮನೆಯನ್ನು ಮಾರಾಟ ಮಾಡಲು ಅಮರೇಶ ಯತ್ನಿಸುತ್ತಿದ್ದ. ಹೀಗಾಗಿ ಈ ಸಂಬಂಧ ನಿನ್ನೆ ತಡರಾತ್ರಿ ಮನೆಯಲ್ಲಿ ಗಲಾಟೆಯಾಗಿತ್ತು. ಆಗ ತಾಯಿ, ಅಕ್ಕ, ಸೋದರಳಿಯ ಒಗ್ಗೂಡಿ ಅಮರೇಶನ ತಲೆಗೆ ಕೊಡಲಿಯಿಂದ ಹೊಡೆದು, ಕುತ್ತಿಗೆಗೆ ಹಗ್ಗ ಬಿಗಿದು ಕೊಂದು, ಶವ ಮನೆಯಿಂದ ಹೊರಕ್ಕೆ ಎಸೆದಿದ್ದರು. ಬಳಿಕ ಕೊಲೆಯ ಬಗ್ಗೆ ಅನುಮಾನ ಬಾರದಂತೆ ಮನೆಯವರು ವರ್ತಿಸಿದ್ದರು. ಬೆಳಗ್ಗೆ ಸ್ಥಳೀಯರು ನೀಡಿದ್ದ ಮಾಹಿತಿ ಮೇರೆಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ತನಿಖೆಗಿಳಿದಾಗ ಸತ್ಯಾಂಶ ತಿಳಿದುಬಂದು, ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net