ಬೇರೆ ಮದುವೆಯಾಗಲು ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ

triple talaq case
Published on

ಪಡುಬಿದ್ರಿ(ಉಡುಪಿ): ಕಾಪು ತಾಲೂಕಿನ ಮಲ್ಲಾರು ಕೋಟೆ ರಸ್ತೆಯ ಆಸ್ಮಾ ಭಾನು(37) ಎಂಬುವರ ಪತಿ ಮೊಹಮ್ಮದ್ ಸಾದಿಕ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಲ್ಲದೆ ಬೇರೆ ಮದುವೆಯಾಗುವ ಉದ್ದೇಶದಿಂದ ತಲಾಕ್ ನೀಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದೇಶದಲ್ಲಿದ್ದೂ ಪತ್ನಿಗೆ ಹಿಂಸೆ

ಶರೀಯತ್ ಪ್ರಕಾರ ಅವರ ವಿವಾಹವಾಗಿದ್ದು, ವಿವಾಹದ ಬಳಿಕ ಸಾದಿಕ್ ಪತ್ನಿಯೊಂದಿಗೆ ಸರಿಯಾಗಿ ಮಾತನಾಡದೆ ತವರು ಮನೆಗೆ ಹಾಗೂ ಅಲ್ಲಿನ ಕಾರ್ಯಕ್ರಮಗಳಿಗೆ ಹೋಗಲು ಬಿಡದೆ ನಿಂದಿಸುತ್ತಿದ್ದ. ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ವಿವಾಹವಾದ ಆರು ತಿಂಗಳ ಬಳಿಕ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದ ಬಳಿಕವೂ ಅಲ್ಲಿಂದ ಮೊಬೈಲ್ ಕರೆ ಮಾಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ಆಸ್ಮಾ ಆರೋಪಿಸಿದ್ದಾರೆ.

ಪತ್ನಿ, ಮಕ್ಕಳಿಗೆ ಹಲ್ಲೆ

ಎರಡು ವರ್ಷದ ಬಳಿಕ ಉದ್ಯೋಗ ಕಳೆದುಕೊಂಡು ಊರಿಗೆ ಬಂದು ವ್ಯವಹಾರಕ್ಕೆಂದು ಆಸ್ಮಾ ಅವರ 22 ಪವನ್ ಚಿನ್ನವನ್ನು ಬ್ಯಾಂಕ್‌ನಲ್ಲಿಟ್ಟು ಹಣ ಪಡೆದು, ನಂತರ ಚಿನ್ನವನ್ನು ಮರಳಿ ಕೇಳಿದಾಗ ನಿನಗೆ ತಲಾಕ್ ನೀಡುತ್ತೇನೆ, ನೀನು ಮನೆಬಿಟ್ಟು ಹೋಗದಿದ್ದರೆ ಕೊಂದು ಬೇರೆ ವಿವಾಹವಾಗುತ್ತೇನೆಂದು ಹೆದರಿಸಿದ್ದಾನೆ. ಪತ್ನಿ ಹಾಗೂ ಮಕ್ಕಳಿಗೆ ಒಂದಲ್ಲ ಒಂದು ಕಾರಣಕ್ಕೆ ಹಲ್ಲೆ ಮಾಡಿ ನಿಂದಿಸುತ್ತಿದ್ದಾನೆ. ಬುಧವಾರ ರಾತ್ರಿ ಮನೆಗೆ ಬಂದು ಆಸ್ಮಾರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆ ಬಿಟ್ಟು ಹೋಗು, ಇಲ್ಲವಾದಲ್ಲಿ ನನಗೆ ಬೇರೆ ಮದುವೆಯಾಗಲು ಆಗುವುದಿಲ್ಲ ಎಂದು ಹೇಳಿ ತ್ರಿವಳಿ ತಲಾಕ್ ನೀಡಿದ್ದಾನೆೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net