

BMTC Conductor: ದೇವನಹಳ್ಳಿಯಿಂದ ಮೆಜೆಸ್ಟಿಕ್‌ಗೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ (ನೋಂದಣಿ ಕೆಎ-57 ಎಫ್-4029) ಒಳಗೆ ಟಿಕೆಟ್ ವಿವಾದಕ್ಕೆ ಸಂಬಂಧಿಸಿದಂತೆ ಹೊರ ರಾಜ್ಯದ ವ್ಯಕ್ತಿಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಪ್ರಯಾಣಿಕನೊಬ್ಬ ಕಂಡಕ್ಟರ್‌ಗೆ ನಡುವಿನ ವಾಗ್ವಾದದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡ ಮಾತನಾಡಲು ಬರದ ಯುವಕ ಬಸ್ ಹತ್ತಿದ ಮತ್ತು ಕಂಡಕ್ಟರ್ ಟಿಕೆಟ್ ನೀಡುವವರೆಗೆ ಕಾಯುತ್ತಿದ್ದ ಎನ್ನಲಾಗಿದೆ, ಆದರೆ ನಿರ್ವಾಹಕ ಅವನ ಬಳಿಗೆ ಬಂದು ಟಿಕೆಟ್ ನೀಡದೆ ಹಾಗೆಯೇ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದಾದ ಕೆಲವೇ ನಿಮಿಷಗಳಲ್ಲಿ ಟಿಕೆಟ್ ತಪಾಸಣಾ ತಂಡ ಬಸ್ ಹತ್ತಿದಾಗ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ಆ ಯುವಕನಿಗೆ 420 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು, ಕಂಡಕ್ಟರ್ ಕೋಪದಲ್ಲಿ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಎಂದು ಹೇಳಲಾಗುತ್ತಿದೆ.
ಈ ಘಟನೆಯ ಕುರಿತು ಸ್ಪಷ್ಟಿಕರಣ ನೀಡಿರುವ ಆ ಯುವಕ, ತಾನು ಪದೇ ಪದೇ ಬಸ್ ಪ್ರಯಾಣ ಮಾಡುವವನಲ್ಲ, ಹಾಗಾಗಿ ಟಿಕೆಟ್ ಖರೀದಿಸಲು ಕಂಡಕ್ಟರ್ ಸಂಪರ್ಕಿಸಬೇಕು ಎನ್ನುವ ವಿಷಯ ಗೊತ್ತಿರಲಿಲ್ಲ ಎಂದಿದ್ದಾನೆ.
ಇದರ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಹೊರ ರಾಜ್ಯದ ಯುವಕ, ಹಿಂದಿಯಲ್ಲಿ ಸರ್, ಆಪ್ಕಾ ನಾಮ್ ಬತಾ ದಿಜಿಯೇ, ಪೊಲೀಸ್ ಠಾಣೆ ಜಾ ರಹಾ ಹೂಂ (ನಿಮ್ಮ ಹೆಸರು ಹೇಳಿ, ನಾನು ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ), ಆಪ್ನೆ ಮಾರಾ ಕೈಸೆ ಮುಝೆ? ನೀನು ನನಗೆ ಹೇಗೆ ಹೊಡೆಯಲು ಸಾಧ್ಯ? ಎಂದು ಕೇಳುತ್ತಿರುವುದು ಕಂಡುಬರುತ್ತದೆ. ಹಲ್ಲೆ ನಡೆದಿರುವುದಾಗಿ ತನ್ನ ಕೆನ್ನೆಯ ಮೇಲಿನ ಗುರುತನ್ನು ತೋರಿಸಿದ್ದಾನೆ.
ಇದನ್ನೂ ಓದಿ:ಜಾತಿ ವಿಷಬೀಜ ಬಿತ್ತುವಲ್ಲಿ ಬಿಜೆಪಿಯವರು ಮುಂದೆ
ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಯುವಕ, ತಾನೂ ಒಬ್ಬ ಸಂಗೀತಗಾರನೆಂದು ಹೇಳಿಕೊಂಡಿದ್ದು, ಈ ಘಟನೆಯ ವಿಷಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾನೆ
ವಿಡಿಯೋ ವೈರಲ್ ಆದ ನಂತರ, BMTC ಡಾಕೆಟ್ ಸಂಖ್ಯೆ BMTC2025011158 ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದ್ದು, ಘಟನೆಯ ಕುರಿತಂತೆ ಸಾರಿಗೆ ನಿಗಮವು ಇನ್ನೂ ಯಾವುದೇ ರೀತಿಯ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.(ಏಜೆನ್ಸೀಸ್)