ಲಿವ್​-ಇನ್ ರಿಲೇಷನ್​ಶಿಪ್​ ಕಿರಿಕಿರಿ! ಅದೊಂದು ಕಾರಣಕ್ಕೆ ಸಿಟ್ಟು, ಮಾಜಿ ಪ್ರೇಯಸಿಗೆ ಬೆಂಕಿಯಿಟ್ಟ ಕ್ಯಾಬ್​ ಚಾಲಕ | Live-In-Partner

ವಿಜಯವಾಣಿ (9)
Published on

Live-In-Partner: ಲಿವ್​-ಇನ್​ ಸಂಬಂಧಕ್ಕೆ ಒಪ್ಪಿಕೊಂಡು, ಜೊತೆಗಿದ್ದ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿಯೊಬ್ಬ, ಇದೀಗ ಆಕೆಯ ಸಾವಿಗೆ ಕಾರಣವಾದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಮೃತ ಮಹಿಳೆಯನ್ನು ವನಜಾಕ್ಷಿ (35) ಎಂದು ಗುರುತಿಸಲಾಗಿದ್ದು, ತನ್ನ ಲಿವ್​-ಇನ್​ ಪಾರ್ಟ್​ನರ್​ನಿಂದ ಮೃತಪಟ್ಟ ದುರ್ದೈವಿ. ಬೆಂಕಿಯಲ್ಲಿ ಬೆಂದು ಹೋಗಿದ್ದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಲಾಯಿತು. ಆದರೆ, ವಿಪರೀತ ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ್ದಾಳೆ.

ಬೆಂಕಿ ಹಚ್ಚಿ ಕೊಲ್ಲಲು ಕಾರಣವೇನು?

'ಎನ್​ಡಿಟಿವಿ' ವರದಿ ಪ್ರಕಾರ, ಆರೋಪಿ ವಿಠಲ್​, ವೃತ್ತಿಯಲ್ಲಿ ಓರ್ವ ಕ್ಯಾಬ್ ಚಾಲಕ. ಈತನಿಗೆ ಕುಡಿತದ ಚಟವಿತ್ತು. ವನಜಾಕ್ಷಿಗೂ ಮೊದಲು ಆತನಿಗೆ ಮೂರು ಮದುವೆಯಾಗಿತ್ತು. ಅತ್ತ ಆಕೆಗೆ ಈ ಹಿಂದೆ ಎರಡು ಮದುವೆಯಾಗಿತ್ತು. ಇದಾದ ಬಳಿಕ ಪರಿಚಯಗೊಂಡ ಇವರಿಬ್ಬರು, ನಾಲ್ಕು ವರ್ಷಗಳ ಹಿಂದೆ ಲಿವ್​-ಇನ್ ಸಂಬಂಧಕ್ಕೆ ಒಪ್ಪಿಕೊಂಡಿದ್ದರು. ಆದರೆ, ವಿಠಲ್​ನ ಕುಡಿತಕ್ಕೆ ಬೇಸತ್ತ ಮಹಿಳೆ, ಇತ್ತೀಚೆಗಷ್ಟೇ ಈ ಸಂಬಂಧ ಕಡಿದುಕೊಂಡು, ಹೊರನಡೆದಿದ್ದಳು. ಇದರಿಂದ ಕುಪಿತಗೊಂಡಿದ್ದ ಆರೋಪಿ, ಆಕೆಗೆ ಮರಿಯಪ್ಪ ಎಂಬ ವ್ಯಕ್ತಿಯೊಂದಿಗೆ ಸ್ನೇಹವಿರುವುದನ್ನು ತಿಳಿದಿದ್ದನು ಎಂದು ವರದಿಯಾಗಿದೆ.

ಕಾರು ತಡೆದು ಬೆಂಕಿ

ಈ ಘಟನೆ ನಡೆಯುವ ದಿನ, ವನಜಾಕ್ಷಿ ಸಾಗುತ್ತಿದ್ದ ಕಾರನ್ನು ಹಿಂಬಾಲಿಸಿದ ವಿಠಲ್​, ಆಕೆ ದೇವಸ್ಥಾನದಿಂದ ಹಿಂತಿರುಗುವವರೆಗೂ ಅಲ್ಲೇ ಕಾದು ಕುಳಿತ್ತಿದ್ದ. ನಂತರ, ಟ್ರಾಫಿಕ್​ ಸಿಗ್ನಲ್​ ಬಳಿ ಆಕೆಯಿದ್ದ ಕಾರನ್ನು ತಡೆದ ಆತ, ವನಜಾಕ್ಷಿ ಮೇಲೆ ಪೆಟ್ರೋಲ್​ ಸುರಿದು ಬೆಂಕಿಯಿಟ್ಟ. ಈ ವೇಳೆ ಕಾರಿನಲ್ಲಿದ್ದ ಚಾಲಕ ಮತ್ತು ಮರಿಯಪ್ಪ ಬಚಾವ್ ಆಗಿದ್ದಾರೆ. ಆದರೆ, ಮಹಿಳೆ ಪೂರ್ಣವಾಗಿ ಬೆಂದುಹೋಗಿದ್ದಳು. ಸುಮಾರು 60 ಭಾಗ ಸುಟ್ಟ ಗಾಯಗಳಿಂದ ನರಳಾಡಿದ ವನಜಾಕ್ಷಿ, ಕಡೆಗೂ ಬದುಕುಳಿಯಲಿಲ್ಲ. ಘಟನೆ ನಡೆದ 24 ಗಂಟೆಗಳ ಅವಧಿಯಲ್ಲಿ ಆರೋಪಿ ವಿಠಲ್​ನನ್ನು ಪೊಲೀಸರು ಬಂಧಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net