

ಬಿಡದಿ: ಮನುಷ್ಯನ ಹತ್ತಾರು ಬುರುಡೆ ಹಾಗೂ ಕೆಲವು ಮೂಳೆಗಳನ್ನ ಇಟ್ಟುಕೊಂಡು ಪೂಜೆ ನಡೆಸುತ್ತಿದ್ದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜೋಗರದೊಡ್ಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗ್ರಾಮದ ಬಲರಾಮ್ ಎಂಬ 30 ವರ್ಷದ ವ್ಯಕ್ತಿ ತನ್ನ ತೋಟದ ಮನೆಯಲ್ಲಿ ಮನುಷ್ಯನ ಬುರುಡೆಗಳನ್ನ ಇಟ್ಟುಕೊಂಡು ಪೂಜೆ ಮಾಡುತ್ತಿದ್ದ. ಸ್ಮಶಾನಗಳಲ್ಲಿ ಶವಗಳನ್ನ ಊಳುತ್ತಿದ್ದನ್ನ ಗಮನಿಸಿಕೊಂಡು ರಾತ್ರಿ ವೇಳೆ ಸ್ಮಶಾನಕ್ಕೆ ಹೋಗಿ ಗುಂಡಿಯಿಂದ ದೇಹ ಹೊರ ತಗೆದು ಬುರುಡೆ ಸೇರಿದಂತೆ ಹಲವು ಮೂಳೆಗಳನ್ನ ತಂದು ತೋಟದ ಮನೆಯಲ್ಲಿ ಸಂಗ್ರಹಿಸಿ ಪೂಜೆ ಮಾಡುತ್ತಿದ್ದ.
ಸ್ಮಶಾನ ಕಾಳಿ ಪೀಠ ಎಂದು ಹೇಳಿಕೊಂಡು ಸಣ್ಣ ದೇವಾಲಯ ಕಟ್ಟಿಕೊಂಡು ಪೂಜೆ ಮಾಡುತ್ತಿದ್ದ. ದೇವಾಲಯಕ್ಕೆ ಯಾರನ್ನ ಸಹ ಸೇರಿಸುತ್ತಿರಲಿಲ್ಲ. ಬುರುಡೆಗಳ ಜೊತೆಗೆ ತ್ರಿಶೂಲಗಳನ್ನ ಇಟ್ಟಿಕೊಂಡು ಪೂಜೆ ಮಾಡುತ್ತಿದ್ದ. ಭಾನುವಾರ ರಾತ್ರಿ ಸ್ಮಶಾನದಿಂದ ಬುರುಡೆಯನ್ನ ತರವುವಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದದ್ದಾನೆ.
ಈ ವೇಳೆ ಗ್ರಾಮಸ್ಥರು ಸ್ಮಶಾನದ ಪೀಠದ ಒಳಗೆ ಹೋಗಿ ನೋಡಿದಾಗ ನಿಜ ಬಣ್ಣ ಬಯಲಾಗಿದೆ. 20 ಕ್ಕು ಹೆಚ್ಚು ಮನುಷ್ಯನ ತಲೆ ಬುರುಡೆಗಳು ಹಾಗೂ ಕೆಲವು ಮೂಳೆಗಳು ಪತ್ತೆಯಾಗಿವೆ. ಈ ವಿಷಯವನ್ನ ತಕ್ಷಣ ಗ್ರಾಮಸ್ಥರು ಬಿಡದಿ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಬಲರಾಮ್ ನನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ.