ಶ್ರೀಗಂಧ ಮರಗಳ ಕಡಿದು ಸಾಗಿಸುತ್ತಿದ್ದವನ ಸೆರೆ

SRP_10-02jpj
Published on

ಶ್ರೀರಂಗಪಟ್ಟಣ: ತಾಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ದೇವರ ಕಾಡಿನ ಪ್ರದೇಶದ ಕರಿಘಟ್ಟ ಏತ ನೀರಾವರಿ ನಾಲೆ ಪಕ್ಕದಲ್ಲಿ ಒಣಗಿದ ಶ್ರೀಗಂಧದ ಮರಗಳ ಬುಡವನ್ನು ಅಕ್ರಮವಾಗಿ ಕಡಿದು ಸಾಗಣೆ ಮಾಡಲು ಮುಂದಾಗಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನ ಧರ್ಮಪುರಿ ಜಿಲ್ಲೆ, ಕೃಷ್ಣಗಿರಿ ತಾಲೂಕಿನ ಕುಂಬಳಮ್ಮಾ ಪಂಚಾಯಿತಿ ರಾಮದೊಡ್ಡಿ ಗ್ರಾಮದ ಸಿ.ವೆಂಕಟೇಶ್(38) ಬಂಧಿತ ಆರೋಪಿ. ಈತತ ಜತೆ ಮತ್ತೊಬ್ಬ ಆರೋಪಿ ತಾಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿ ಕಳ್ಳಿಕೊಪ್ಪಲು ಗ್ರಾಮದ ಗೋವಿಂದ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಬಲೆ ಬೀಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಸಂಜೆ ದೇವರ ಕಾಡು ಪ್ರದೇಶದಲ್ಲಿ ಗಸ್ತಿನಲ್ಲಿದ್ದ ವೇಳೆ ಆರೋಪಿಗಳ ಕೃತ್ಯ ಪತ್ತೆಯಾಗಿದ್ದು, ಬಂಧಿತನಿಂದ 2 ತುಂಡು ಹಾಗೂ ಚಕ್ಕೆಗಳಿಂದ ಒಟ್ಟು 8.95 ಕೆಜಿ ತೂಕದಷ್ಟು ಶ್ರೀಗಂಧವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ವಿನೋದ್‌ಗೌಡ, ಡಿಆರ್‌ಎಫ್‌ಒ ನಾಗರಾಜು, ಗಸ್ತು ಅರಣ್ಯ ಪಾಲಕರಾದ ಶ್ರವಣ ಕುಮಾರ್, ಬಸವರಾಜು, ಐಶ್ವರ್ಯಾ, ಕಾಂತರಾಜು ಹಾಗೂ ವೀಕ್ಷಕರಾದ ವಿನೋದ್ ನಾಟಿಕಾರ್, ಲೋಕೇಶ್, ರಾಜೇಂದ್ರ, ಬಾಲು ಮತ್ತು ವಾಹನ ಚಾಲಕ ಚನ್ನಕೇಶವ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net