

ವಿಜಯವಾಣಿ ಸುದ್ದಿಜಾಲ ಹಾವೇರಿ
ಕರೆದಾಗ ಬರಲಿಲ್ಲ ಎಂಬ ಕಾರಣಕ್ಕೆ ಬಾಲಕಿಯೊಬ್ಬಳ ಹೆಸರಿಯಲ್ಲಿ ಫೇಸ್ಬುಕ್ ಪೇಜ್ ಕ್ರಿಯೇಟ್ ಮಾಡಿ ಆಕೆಯ ಜತೆಗಿನ ಅಶ್ಲೀಲ ಫೋಟೋ ಅಪಲೋಡ್ ಮಾಡಿದ ಯುವಕನೊಬ್ಬ ಇದೀಗ ಸೈಬರ್ ಕ್ರೖೆಂ ಪೊಲೀಸರ ಅತಿಥಿಯಾಗಿದ್ದಾನೆ.
ತಾಲೂಕಿನ ಬಸಲಿಕಟ್ಟಿ ತಾಂಡಾ ನಿವಾಸಿ ಕಿರಣ ದೇವೇಂದ್ರಪ್ಪ ಪೂಜಾರ (26) ಬಂಧಿತ ಆರೋಪಿ.
ಈತ ನಗರದಲ್ಲಿ ಎಸ್ಸೆಸ್ಸೆಲ್ಸಿ ಅಧ್ಯಯನ ಮಾಡುತ್ತಿದ್ದ ಬಾಲಕಿಯೊಬ್ಬಳೊಂದಿಗೆ ಸ್ನೇಹ ಬೆಳೆಸಿದ್ದ. ಆಕೆಯ ಕೆನ್ನೆಗೆ ಮುತ್ತು ಕೊಟ್ಟು ಅದನ್ನು ಸ್ನೇಹಿತನೊಬ್ಬನಿಂದ ಫೋಟೋ ತೆಗೆಸಿಕೊಂಡಿದ್ದ. ಕರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಘೊಷಣೆಯಾಗಿದ್ದರಿಂದ ಬಾಲಕಿಯು ಶಾಲೆ ಬಿಟ್ಟು ಮನೆಯಲ್ಲಿಯೇ ಇದ್ದಳು. ಈ ಸಮಯದಲ್ಲಿ ಆಕೆಯನ್ನು ಹೊರಗಡೆ ಬರಲು ಕಿರಣ ಒತ್ತಾಯಿಸಿದ್ದಾನೆ. ಅದಕ್ಕೆ ಬಾಲಕಿ ನಿರಾಕರಿಸಿದ್ದಳು. ಆಗ ಕಿರಣ ಬರದಿದ್ದರೆ ಫೇಸ್ಬುಕ್ನಲ್ಲಿ ಫೋಟೋ ಹಾಕುವ ಬೆದರಿಕೆ ಹಾಕಿದ್ದನು. ಬಾಲಕಿ ಇದಕ್ಕೂ ಒಪ್ಪದ ಹಿನ್ನೆಲೆಯಲ್ಲಿ ಕಿರಣ ಆಕೆಯ ಹೆಸರಿನಲ್ಲಿ ಫೆಸ್ಬುಕ್ ಪೇಜ್ ಕ್ರಿಯೇಟ್ ಮಾಡಿ ‘ಆಕೆಗೆ ಮುತ್ತು ಕೊಟ್ಟ ಫೋಟೋ ಅಪ್ಲೋಡ್ ಮಾಡಿದ್ದಾನೆ. ಈ ಕುರಿತು ಬಾಲಕಿಯ ಕುಟುಂಬದವರು ಹಾವೇರಿ ಸೈಬರ್ ಕ್ರೖೆಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸೈಬರ್ ಕ್ರೖೆಂ ಠಾಣೆಯ ಸಿಪಿಐ ಚಿದಾನಂದ ಹಾಗೂ ರಾಣೆಬೆನ್ನೂರ ಗ್ರಾಮೀಣ ಠಾಣೆ ಪಿಎಸ್ಐ ಮೇಘರಾಜ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಹಾಗೂ ಇತರ ಕಾಯ್ದೆಯಡಿ ದೂರು ದಾಖಲಾಗಿದೆ.
ಜಾತಿ ನಿಂದನೆ ಡ್ರಾಮಾ ಮಾಡಿದ್ದ: ಬಾಲಕಿಯ ಕುಟುಂಬದವರು ಇತ್ತ ದೂರು ದಾಖಲಿಸುತ್ತಿದ್ದಂತೆ ಕಿರಣ ಕೂಡ ಶನಿವಾರ ರಾಣೆಬೆನ್ನೂರ ಗ್ರಾಮೀಣ ಠಾಣೆಗೆ ತೆರಳಿ, ಬಾಲಕಿಯ ಕುಟುಂಬದವರು ನನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದನು. ಆದರೆ, ಹಾವೇರಿ ಸೈಬರ್ ಕ್ರೖೆಂ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆತನನ್ನು ಹಾವೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.