ಅಪೌಷ್ಟಿಕದಿಂದ ಬಳಲುತ್ತಿದ್ದಾರೆ ಅಂಗನವಾಡಿ ಮಕ್ಕಳು

kottur
ಕೊಟ್ಟೂರಿನ ತಾಪಂ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಶರಣಪ್ಪ ಮುದಗಲ್ ಮಾತನಾಡಿದರು
Published on

ಕೊಟ್ಟೂರು: ತಾಲೂಕಿನ 46 ಮಕ್ಕಳು ಅಪೌಷ್ಟಿಕದಿಂದ ಬಳಲುತ್ತಿದ್ದಾರೆಂಬ ಮಾಹಿತಿ ಇದ್ದು, ಶೀಘ್ರ ಗುರುತಿಸಿ ಅವರ ಆರೋಗ್ಯ ಸುಧಾರಣೆಗೆ ಕ್ರಮಕೈಗೊಳ್ಳಬೇಕು ಎಂದು ತಾಪಂ ಆಡಳಿತಾಧಿಕಾರಿ ಶರಣಪ್ಪ ಮುದಗಲ್ ಸೂಚಿಸಿದರು.

ಬಾಲ್ಯವಿವಾಹದಿಂದ ಅಪೌಷ್ಟಿಕ ಕೊರತೆಯುಳ್ಳ ಮಕ್ಕಳು ಜನನ

ತಾಪಂ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಅಂಗನವಾಡಿ ಮಕ್ಕಳು ಅಪೌಷ್ಟಿಕದಿಂದ ಬಳಲು ಕಾರಣವೇನು?. ಇದು ನಿಮ್ಮ ಇಲಾಖೆ ಬೇಜಬ್ದಾರಿತನ. ಈ ಸಮಸ್ಯೆ ನಿವಾರಣೆಗೆ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದ ಶರಣಪ್ಪ, ಎಲ್ಲ ಮಕ್ಕಳನ್ನು ಸರ್ಕಾರಿ ಆಸ್ಪತ್ರೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ, ಔಷಧೋಪಚಾರ ಮಾಡುವಂತೆ ಅಂಗನವಾಡಿ ಮುಖ್ಯ ಮೇಲ್ವಿಚಾರಕಿ ವಿಜಯಲಕ್ಷ್ಮೀಗೆ ತಾಕೀತು ಮಾಡಿದರು. ಟಿಎಚ್‌ಒ ಪ್ರದೀಪ್ ಮಾತನಾಡಿ, ಬಾಲ್ಯವಿವಾಹದಿಂದಾಗಿ ಅಪೌಷ್ಟಿಕ ಕೊರತೆಯುಳ್ಳ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದರು.

ಜನರು ನೀರನ್ನು ಮಿತವಾಗಿ ಬಳಸಿದರೆ ತೀವ್ರ ಸಮಸ್ಯೆ ತಲೆದೋರದು

ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯಾತ್ಮಕ 19 ಗ್ರಾಮಗಳನ್ನು ಗುರುತಿಸಲಾಗಿದೆ. ಜನರು ನೀರನ್ನು ಮಿತವಾಗಿ ಬಳಸಿದರೆ ತೀವ್ರ ಸಮಸ್ಯೆ ತಲೆದೋರದು ಎಂದು ಎಇಇ ಬಿ.ಆರ್.ಪ್ರಸನ್ನ ಸಭೆಗೆ ತಿಳಿಸಿದರು. ಕುಡಿವ ನೀರನ್ನು ಪೋಲು ಮಾಡದಂತೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಕುಡಿವ ನೀರಿನ ಪೈಪ್‌ಗೆ ಕಲುಷಿತ ನೀರು ಸೇರದಂತೆ ಪಿಡಿಒಗಳು ಕ್ರಮವಹಿಸಬೇಕು ಎಂದು ಶರಣಪ್ಪ ಸೂಚಿದರು.

ಗೃಹಜ್ಯೋತಿ ಯೋಜನೆಗೆ ತಾಲೂಕಿನಲ್ಲಿ 19,700 ಫಲಾನುಭವಿಗಳು

ಜೆಸ್ಕಾಂ ಎಇಇ ಪ್ರಕಾಶ ಪತ್ತೇನೂರು ಮಾತನಾಡಿ, ಗೃಹಜ್ಯೋತಿ ಯೋಜನೆಗೆ ತಾಲೂಕಿನಲ್ಲಿ 19,700 ಫಲಾನುಭವಿಗಳಿದ್ದು, 200 ಯೂನಿಟ್ ಕರೆಂಟ್ ಬಳಕೆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ ದಿಂಡೂರು ಮಾತನಾಡಿ, ತಾಲೂಕಿನಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ 5 ಹಾಸ್ಟೆಲ್‌ಗಳಿದ್ದು, ಎಸ್ಸಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ವಸತಿ ನಿಲಯಕ್ಕೆ ಸೇರಿಸಿಕೊಳ್ಳಲು ಸರ್ಕಾರದ ಆದೇಶವಿದೆ ಎಂದರು.

ಜೂನ್‌ನಲ್ಲಿ 130 ಎಂ.ಎಂ. ಮಳೆಯಾಗಬೇಕಿತ್ತು

ತಾಲೂಕಿನಲ್ಲಿ ಒಂದು ಪಶು ಆಸ್ಪತ್ರೆ ಸೇರಿ 7 ಉಪ ಕೇಂದ್ರಗಳಿವೆ. ಆದರೆ ಇಡೀ ತಾಲೂಕಿಗೆ ಕೇವಲ ಒಬ್ಬ ವೈದ್ಯರಿದ್ದು, 29 ಸಿಬ್ಬಂದಿ ಅಗತ್ಯವಿದೆ. ಈಗ ಕೇವಲ ನಾಲ್ಕು ಕಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಶು ವೈದ್ಯಾಧಿಕಾರಿ ಡಾ. ಕೊಟ್ರೇಶ ಸಭೆಗೆ ಮಾಹಿತಿ ನೀಡಿದರು. ಜೂನ್‌ನಲ್ಲಿ 130 ಎಂ.ಎಂ. ಮಳೆಯಾಗಬೇಕಿತ್ತು. ಆದರೆ ಕೇವಲ 30 ಮಿಮೀ ಮಳೆ ಸುರಿದಿದ್ದು, ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಇನ್ನೂ ಮೂರ‌್ನಾಲ್ಕು ದಿನಗಳಲ್ಲಿ ಮಳೆಯಾಗದಿದ್ದರೆ, ಈಗ ಬೆಳೆದಿರುವ ಪೈರುಗಳು ಒಣಗುತ್ತವೆ ಎಂದು ಕೃಷಿ ಅಧಿಕಾರಿ ಸುನೀಲ್ ಕುಮಾರ್ ತಿಳಿಸಿದರು.ತಾಪಂ ಇಒ ಪರಮೇಶ್ವರಪ್ಪ, ಇಡಿ ವಿಜಯಕುಮಾರ್, ಜೆಸ್ಕಾಂ ಎಇಇ ಪ್ರಕಾಶ ಪತ್ತೇನೂರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ ದಿಂಡೂರು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net