

ಆಲೂರು: ಕಣತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಿದ್ದಾಪುರದ ಮಲ್ಲಿಕಾರ್ಜುನ, ಉಪಾಧ್ಯಕ್ಷರಾಗಿ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ಸಂಘದ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರ ಸ್ಥಾನಕ್ಕೆ ಸಿದ್ದಾಪುರದ ಮಲ್ಲಿಕಾರ್ಜುನ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಕೊಡಿಗೆಹಳ್ಳಿಯ ಸುರೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹಾಸನ ಸಹಕಾರ ಇಲಾಖೆಯ ಲೀಲಾ ಅವಿರೋಧ ಆಯ್ಕೆ ಘೋಷಿಸಿದರು.
ಹಾಸನ ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಬಣದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಯಶ್ವಂತ್, ರುದ್ರೇಶ್, ಕೆ.ಡಿ. ನಿಂಗರಾಜು, ಎಸ್‌ಎನ್ ಕಿರಣ್ ಕುಮಾರ್, ಆರ್.ಮೇಲೇಗೌಡ, ರಾಜಯ್ಯ, ಜಗತ್ ಕುಮಾರ್, ಗಿರೀಶ್, ಮಮತಾ, ಸವಿತಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಅನುಮೋದನೆ ನೀಡಿದರು.
ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ. ನಿರ್ದೇಶಕರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡು ಸಂಘವನ್ನು ಅಭಿವೃದ್ಧಿಪಡಿಸಲು ಸಹಕರಿಸುವೆ ಎಂದು ಹೇಳಿದರು.
ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೃಥ್ವಿ ರಾಮ್, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಎಸ್. ನಟರಾಜ್, ಆಲೂರು ಪಟ್ಟಣ ಪಂಚಾಯಿತಿ ಸದಸ್ಯ ತೌಫಿಕ್ ಅಹಮದ್, ನವೀನ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಮುರುಡೂರು ಮಹೇಶ್, ಭಾವಸವಳ್ಳಿ ಆನಂದ್, ಸಿದ್ದಾಪುರ ಚಂದ್ರಶೇಖರ್, ಯಳಗನಹಳ್ಳಿ ಧರ್ಮಪ್ಪ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಭಾಸ್ಕರ, ಸಿಬ್ಬಂದಿ ಅನುರೂಪ, ನಾಗೇಶ್ ಇತರರಿದ್ದರು.