

ಕಲಬುರಗಿ: ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಖರ್ಗೆ ಮಾತಿನ ವಿಶಿಷ್ಟ ಶೈಲಿಯಿಂದ ನಡುಕ ಹುಟ್ಟಿದೆ. ಖರ್ಗೆ ಅವರ ತತ್ವ , ಸಿದ್ಧಾಂತ ಮತ್ತು ವಿಚಾರಧಾರೆಗಳಿಂದ ಬಿಜೆಪಿ ವಲಯದಲ್ಲಿ ಭಯ ಮನೆ ಮಾಡಿದೆ. ಪ್ರಧಾನಿಯಾಗಲು ಖರ್ಗೆ ಎಲ್ಲ ಅರ್ಹತೆ ಹೊಂದಿದ್ದಾರೆ. ಗಾಂಧಿ ಕುಟುಂಬ ದಲಿತ ಪ್ರಧಾನಿ ಬಗ್ಗೆ ಆಸಕ್ತಿ ತೋರಿದೆ. ಎಲ್ಲರೂ ಸೇರಿ ಪಕ್ಷ ಬಲಪಡಿಸಿ ಲೋಕಸಭೆಯಲ್ಲಿ ನಮ್ಮ ಶಕ್ತಿ ತೋರಿಸಬೇಕಿದೆ ಎಂದರು.
ಕರ್ನಾಟಕ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಖರ್ಗೆ ಅವರ ಕೈ ಬಲಪಡಿಸಲು ಸನ್ನದ್ಧರಾಗಬೇಕು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಠ ೨೦ ಸ್ಥಾನ ಗಳಿಸುವ ವಿಶ್ವಾಸವಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಹೆಚ್ಚಿನ ಸ್ಥಾನ ಗೆದ್ದರೆ ಲೋಕಸಭಾ ಚುನಾವಣೆಗೆ ಹೋಗಲು ಹೆಚ್ಚಿನ ಬಲ ಬರಲಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ. ಈಗಿನಿಂದಲೇ ಕಾರ್ಯಕರ್ತರು ಚುರುಕಿನಿಂದ ಕೆಲಸ ಮಾಡಲು ಮುಂದಾಗಬೇಕು ಎಂದರು.
ಶಾಸಕ ಬಿ.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಸಚಿವ ರೇವೂನಾಯಕ್ ಬೆಳಮಗಿ, ಪ್ರಮುಖರಾದ ಶಿವಾನಂದ ಪಾಟೀಲ್ ಮರತೂರ್, ಅರುಣಕುಮಾರ ಪಾಟೀಲ್, ಬಾಬು ಒಂಟಿ, ಲತಾ ರವಿ ರಾಠೋಡ್, ರೇಣುಕಾ ಸಿಂಗೆ, ಮಲ್ಲಿಕಾರ್ಜುನ ಪೂಜಾರಿ, ಮಹಾಂತೇಶ ಕೌಲಗಿ, ಮಜರ್ ಆಲಂ ಖಾನ್, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ಲಿಂಗರಾಜ ತಾರಫೈಲ್ ಇತರರಿದ್ದರು. ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಸ್ವಾಗತಿಸಿ, ನಿರೂಪಣೆ ಮಾಡಿದರು.