ಶಿವರಾತ್ರಿಗೆ ಮಳೆ ಮಲ್ಲೇಶ್ವರ ಬೆಟ್ಟ ಸಜ್ಜು

mar 6 SS1 MALEMALLESHWARA
Published on

ಶನಿವಾರಸಂತೆ: ಕೊಡಗು ಜಿಲ್ಲೆಯಲ್ಲಿರುವ ಎತ್ತರದ ಬೆಟ್ಟಗಳಲ್ಲಿ 3ನೇ ಸ್ಥಾನದಲ್ಲಿರುವ ಮಳೆ ಮಲ್ಲೇಶ್ವರಬೆಟ್ಟ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿದ್ದು, ಮಾ.8ರ ಶಿವರಾತ್ರಿಯಂದು ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ.


ಸಮುದ್ರ ಮಟ್ಟದಿಂದ 5494 ಅಡಿ ಎತ್ತರದಲ್ಲಿರುವ ಈ ಬೆಟ್ಟ, ಸೋಮವಾರಪೇಟೆ ತಾಲೂಕಿನ ಏಳು ಸಾವಿರ ಸೀಮೆಯ ಬೆಟ್ಟದ ಸಾಲುಗಳಲ್ಲಿ ಎತ್ತರದ ಬೆಟ್ಟಗಳಲ್ಲಿ 2ನೇ ಸ್ಥಾನ ಪಡೆದಿದೆ. ಮಳೆಮಲ್ಲೇಶ್ವರ ಬೆಟ್ಟವನ್ನು ಮಾಲಂಬಿ ಗ್ರಾಮದ ಮೂಲಕ ಹಾಗೂ ಬೆಟ್ಟದ ಕೆಳಭಾಗದಲ್ಲಿರುವ ಗೌಡಳ್ಳಿ-ಬೀಟೆಕಟ್ಟೆ ಗ್ರಾಮದ ಮೂಲಕವೂ ಏರಬಹುದಾಗಿದೆ. ಈ ಬೆಟ್ಟದ ಬಹುತೇಕ ಭಾಗ ಹಸಿರು ವನಸಿರಿಯಿಂದ ಮತ್ತು ಕಾಫಿತೋಟಗಳಿಂದ ಆವರಿಸಿಕೊಂಡಿದ್ದು ಚಾರಣ ಮಾಡಲು ಸುಸ್ತಾಗದೆ ತಂಪೆನೆಸುತ್ತದೆ.


ಬೆಟ್ಟದ ತುತ್ತತುದಿಯಲ್ಲಿ ಸುಂದರವಾದ ಮಳೆ ಮಲ್ಲೇಶ್ವರನ ದೇವಾಲಯವನ್ನು ದಾನಿಗಳಿಂದ ನಿರ್ಮಿಸಲಾಗಿದೆ. ಬೆಟ್ಟದ ತುದಿಯ ಪ್ರಾಂಗಣದಲ್ಲಿ ಕುಳಿತು ಸುತ್ತಲೂ ವೀಕ್ಷಿಸಿದಾಗ ಪಶ್ಚಿಮ ದಿಕ್ಕಿನಲ್ಲಿ ಪುಷ್ಪಗಿರಿ ಬೆಟ್ಟಸಾಲು, ಬಿಸ್ಲೆ ಮತ್ತು ಚಾರ್ಮುಡಿ ಪಶ್ಚಿಮಘಟ್ಟದ ಬೆಟ್ಟಸಾಲುಗಳನ್ನು ಕಾಣಿಸಿಕೊಂಡರೆ, ಪೂರ್ವ ದಿಕ್ಕಿನಲ್ಲಿ ಬಯಲುಸೀಮೆಯ ಕೆರೆ, ಹೊಲ-ಗದ್ದೆ ಸಾಲುಗಳು, ಹಾಸನ ಜಿಲ್ಲೆಯ ಗೊರೂರು ಜಲಾಶಯದ ಹಿನ್ನೀರನ್ನು ವೀಕ್ಷಿಸಬಹುದಾಗಿದೆ. ಇದೀಗ ಈ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆಗೆ ಒಳಪಡಿಸಿದ್ದು ಬೆಟ್ಟವನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ.


350 ವರ್ಷಗಳ ಇತಿಹಾಸ: ಮಳೆಮಲ್ಲೇಶ್ವರ ಬೆಟ್ಟಕ್ಕೆ ಸುಮಾರು 350 ವರ್ಷಗಳ ಇತಿಹಾಸವಿದೆ. 17ನೇ ಶತಮಾನದಲ್ಲಿ ಶ್ರವಣಬೆಗೊಳದ ಜೈನ ಅರಸರು ತಮ್ಮ ಆಸ್ಥಾನದ ಮಾಳವ ಎಂಬ ಅಧಿಕಾರಿಯನ್ನು ಈಗಿನ ಮಾಲಂಬಿ ಗ್ರಾಮಕ್ಕೆ ಆಳ್ವಿಕೆ ಮಾಡಲು ಕಳುಹಿಸಿಕೊಡುತ್ತಾನೆ. ಅದರಂತೆ ಮಾಳವ ಮಾಲಂಬಿ ಗ್ರಾಮದಲ್ಲಿ ಅನೇಕ ಸುಧಾರಣೆಗಳನ್ನು ತರುತ್ತಾನೆ, ಮಾಳವ ತೀರಿಕೊಂಡ ನಂತರ ಅವನು ಆಳ್ವಿಕೆ ನಡೆಸಿದ ಗ್ರಾಮಕ್ಕೆ ಮಾಲಂಬಿ ಎಂಬ ಹೆಸರು ಬಂದಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ.


ಇದಕ್ಕೆ ಸಾಕ್ಷಿಯಾಗಿ ಮಾಲಂಬಿ ಬೆಟ್ಟದ ಕೆಳಭಾಗದಲ್ಲಿ ಮತ್ತು ಬೆಟ್ಟದ ತುದಿಯಲ್ಲಿ ಚೋಳರ ಕಾಲದ ಕೆಲವೊಂದು ಶಾಸನಗಳು, ತಾಮ್ರದ ವಿಗ್ರಹಗಳು ಸಿಕ್ಕಿವೆ. ಮಳೆಗಾಗಿ ಪ್ರಾರ್ಥಿಸುವ ಸಲುವಾಗಿಯೇ ಜಿಲ್ಲೆ ಮತ್ತು ಹೊರ ಜಿಲ್ಲೆಯ ವ್ಯಾಪ್ತಿಯ ಜನರು ಈ ಬೆಟ್ಟವನ್ನೇರಿ ಪೂಜೆ ಸಲ್ಲಿಸುತ್ತಾರೆ.
1989ರವರೆಗೆ ಮಾಲಂಬಿ ಬೆಟ್ಟದ ಮೇಲೆ ಪುಟ್ಟದಾದ ಮಲ್ಲೇಶ್ವರನ ಗುಡಿಯಲ್ಲಿ ಮಲ್ಲೇಶ್ವರ ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು. ಈ ಭಾಗದಲ್ಲಿ ಹೆಚ್ಚಾಗಿ ಕಾಫಿ ತೋಟಗಳಿವೆ, ಅದಕ್ಕಾಗಿಯೇ ಕಾಫಿ ತೋಟದ ಮಾಲೀಕರು ಮತ್ತು ಗ್ರಾಮದ ದಾನಿಗಳು ಸೇರಿ ಬೆಟ್ಟದ ಮೇಲೆ ಮಲ್ಲೇಶ್ವರನಿಗೆ ನೂತನ ದೇವಾಲಯ ನಿರ್ಮಿಸಲು ಆಲೋಚಿಸಿದರು. ಅದರಂತೆ ಕಾಫಿ ತೋಟದ ಮಾಲೀಕರು ಹಾಗೂ ದಾನಿಗಳ ಸತತ 10 ವರ್ಷಗಳ ಪರಿಶ್ರಮದಿಂದ 1999ರಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸುಂದರ ದೇವಾಲಯ ನಿರ್ಮಾಣವಾಯಿತು. ಅಂದಿನಿಂದ ಪ್ರತಿ ವರ್ಷ ಮಹಾ ಶಿವರಾತ್ರಿ ಹಬ್ಬದಂದು ಮಳೆಮಲ್ಲೇಶ್ವರನ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಿವರಾತ್ರಿ ಮಹೋತ್ಸವವನ್ನು ಆಚರಿಸಲಾಗುತ್ತದೆ.


ಕಾಫಿ ತೋಟಗಳ ಮಾಲೀಕರು ಹಾಗೂ ದಾನಿಗಳು ಸರಕಾರದ ಯಾವುದೇ ರೀತಿಯ ಧನಸಹಾಯ ಪಡೆಯದೆ ಇಲ್ಲಿ ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಅಂದು ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ, ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ ಈ ಬೆಟ್ಟಕ್ಕೆ ಬರಲು ಸರಿಯಾದ ರಸ್ತೆ ಸಂಪರ್ಕ ಇಲ್ಲದ ಕಾರಣದಿಂದ ಸರ್ಕಾರ ಬೆಟ್ಟಕ್ಕೆ ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಲು ಅನುಮತಿ ಕೊಟ್ಟಿತು. ಅದರಂತೆ ಈಗ ಬೆಟ್ಟದ ಮೇಲಿನ ಪ್ರಾಂಗಣದಿಂದ ಬೆಟ್ಟದ ತುದಿಭಾಗದಲ್ಲಿರುವ ದೇವಾಲಯದವರೆಗೂ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ.


ಬೆಟ್ಟಕ್ಕೆಹೋಗುವ ಮಾರ್ಗ: ಅರಕಲಗೋಡು-ಶನಿವಾರಸಂತೆ-ಬೀಟಿಕಟ್ಟೆ ಮಾರ್ಗವಾಗಿ 15 ಕಿಮೀ, ಮೈಸೂರು-ಪಿರಿಯಾಪಟ್ಟಣ ಕಡೆಯಿಂದ ಕುಶಾಲನಗರ ಬಾಣವಾರ ಮಾರ್ಗವಾಗಿ 28 ಕಿಮೀ, ಮಡಿಕೇರಿ ಕಡೆಯಿಂದ ಸೋಮವಾರಪೇಟೆ -ಗೌಡಳ್ಳಿ ಮಾರ್ಗವಾಗಿ 12 ಕಿಮೀ ದೂರದಲ್ಲಿದೆ.
ಮಾ.8ರಂದು ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ದೇವರಿಗೆ ಬೆಳಗಿನಿಂದ ವಿಶೇಷ ಪೂಜೆ ಮಧ್ಯಾಹ್ನ ಮಹಾ ಮಂಗಳಾರತಿ ನಡೆಯಲಿದೆ ಹಾಗೂ ಪ್ರಸಾದ ವಿನಿಯೋಗವನ್ನು ದಾನಿಗಳ ಸಹಕಾರದಲ್ಲಿ ಸಮಿತಿ ಹಮ್ಮಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net