ಗಣಪನ ತಯಾರಿಯಲ್ಲಿ ಮಲ್ಲಣ್ಣ ಕುಟುಂಬದ ಕೈಚಳಕ

MGD GANESHAA
MGD GANESHAA
Published on

93 ವರ್ಷಗಳಿಂದ ಗಣೇಶನ ಮೂರ್ತಿ ನಿರ್ಮಾಣದಲ್ಲಿ ನಿರತ | ಪರಿಸರ ಸ್ನೇಹಿ ಬಣ್ಣ ಬಳಕೆ

ಮಾಗಡಿ: ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಕಲಾವಿದ ಕಂಡ ಎಂಬ ಮಾತಿನಂತೆ ಕುಂಚದಲ್ಲಿ ಅರಳುವ ಕಲೆಗೆ ಜೀವಂತಿಕೆ ತುಂಬುವುದು ಅಷ್ಟು ಸುಲಭದ ಕೆಲಸವಲ್ಲ. ಕಲಾವಿದನಿಗೆ ಶ್ರಮದೊಂದಿಗೆ ಶ್ರದ್ಧೆ, ವಿಶೇಷ ಕಲ್ಪನೆ ಇದ್ದಾಗಲೇ ಕಲೆಗೆ ಜೀವ ತುಂಬಲು ಸಾಧ್ಯ. ಈ ನಿಟ್ಟಿನಲ್ಲಿ ಪಟ್ಟಣದ ಕುಂಬಾರ ಬೀದಿಯ ದಿ.ಮಲ್ಲಣ್ಣ ಕುಟುಂಬ 93 ವರ್ಷಗಳಿಂದ ಪರಿಸರ ಗಣೇಶ ಮೂರ್ತಿ ಮಾಡುತ್ತಿದೆ.

ಹೌದು..! ಕಳೆದ 93 ವರ್ಷಗಳಿಂದ ಮಲ್ಲಣ್ಣ ಕುಟುಂಬ ಗಣೇಶ ಮೂರ್ತಿಗಳನ್ನು ಮಾಡುವುದರಲ್ಲಿಯೇ ತೊಡಗಿಸಿಕೊಂಡಿದ್ದು, ಮಲ್ಲಣ್ಣ ಬಳಿಕ, ಅವರ ಹಿರಿಯ ಮಗ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಜಣ್ಣ, ಮಂಜಣ್ಣನ ನಿಧನ ಬಳಿಕ ಸಹೋದರರಾದ ಗಣೇಶ್, ನಂಜುಂಡಸ್ವಾಮಿ, ಗಿರೀಶ್ ಹಾಗೂ ಮಕ್ಕಳು, ಪತ್ನಿಯರು ಕುಂಚ ಹಿಡಿದಿದ್ದು, ವಿವಿಧ ಭಂಗಿಯ ಗಣಪನ ಮೂರ್ತಿಗಳನ್ನು ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ.

ರಾಜ್ಯವಲ್ಲದೆ ತಮಿಳುನಾಡು, ಆಂಧ್ರದ ಗ್ರಾಹಕರು: ಅರ್ಧ ಅಡಿ ಮೂರ್ತಿಯಿಂದ 15 ಅಡಿ ಎತ್ತರದವರೆಗಿನ ಗಣೇಶ ಮೂರ್ತಿಗಳನ್ನು ಮಲ್ಲಣ್ಣ ಕುಟುಂಬ ತಯಾರಿಸುತ್ತದೆ. ಮಲ್ಲಣ್ಣ ಕುಟುಂಬದವರು ಮಾಡುವ ಗಣೇಶ ಮೂರ್ತಿಗಳನ್ನು ಖರೀದಿಸಲು ಬೆಂಗಳೂರು ನಗರ, ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರದ ಗೌರಿಬಿದನೂರು, ತಮಿಳುನಾಡು, ಆಂಧ್ರದಿಂದಲೂ ಗ್ರಾಹಕರು ಆಗಮಿಸುತ್ತಾರೆ.

ಕುಟುಂಬದವರೆಲ್ಲ ಕಲಾವಿದರೇ: ಎಂಎನ್.ಮಲ್ಲಣ್ಣನವರ ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ವರ್ಷದಲ್ಲಿ 4ರಿಂದ 5 ತಿಂಗಳು ಮಾತ್ರ ಗಣಪ ಮೂರ್ತಿ ಮಾಡುವ ಮಲ್ಲಣ್ಣ ಕುಟುಂಬ, ಉಳಿದ ಎಂಟು ತಿಂಗಳು ಗೋಪುರಗಳ ಮೂರ್ತಿ ಮಾಡುವುದರತ್ತ ಗಮನ ಹರಿಸುತ್ತಾರೆ.

ಬಸವ ಜಯಂತಿಯಂದೇ ಚಾಲನೆ ಮಲ್ಲಣ್ಣ ಕುಟುಂಬವು ಜೇಡಿ ಮಣ್ಣಿನಿಂದಲೇ ಗಣೇಶ ಮೂರ್ತಿ ಮಾಡುವುದನ್ನು ಕರಗತ ಮಾಡಿಕೊಂಡಿದ್ದು, ಪರಿಸರಕ್ಕೆ ಹಾನಿಯಾಗುವ ರಾಸಾಯನಿಕ ಬಣ್ಣದ ಬದಲು ಪರಿಸರ ಸ್ನೇಹಿ ವಾಟರ್ ಪೇಂಟ್ ಬಳಸಿ ಮೂರ್ತಿಗಳ ಅಂದ ಹೆಚ್ಚಿಸುತ್ತದೆ. ಅದಕ್ಕಾಗಿ ತಾಲೂಕಿನ ಬಿಸ್ಕೂರು, ದೊಡ್ಡಮುದಿಗೆರೆ ಕೆರೆಯಿಂದ ಲೋಡ್ ಗಟ್ಟಲೇ ಜೇಡಿ ಮಣ್ಣು ತಂದು ಬಸವ ಜಯಂತಿಯಂದೇ ಸಂಪ್ರದಾಯ ಬದ್ಧವಾಗಿ ಜೇಡಿಮಣ್ಣಿಗೆ ಪೂಜೆ ಸಲ್ಲಿಸಿ, ಅದೇ ದಿನದಂದು ಗೌರಿ, ವಿಘ್ನ ವಿನಾಯಕನ ಸಣ್ಣ ಮೂರ್ತಿಯನ್ನು ಸಾಂಕೇತಿಕವಾಗಿ ಮಾಡಿ, ಅಧಿಕೃತ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುತ್ತದೆ.
ವಿವಿಧ ಭಂಗಿ ವಿಶ್ವರೂಪ ಗಣಪ, ಮುರುಘ, ನರಸಿಂಹಸ್ವಾಮಿ ಅವತಾರ, ವೆಂಕಟೇಶ್ವರ, ಪೇಟ ಗಣಪ, ಶ್ರೀರಾಮ ಗಣಪ, ಪೂರಿ ಜಗನ್ನಾಥ, ವಿಷ್ಣು ಗಣಪತಿ, ದರ್ಬಾರು ಗಣಪತಿ, ಆನೆ ಗುಡ್ಡ, ಸಮುದ್ರ ಮಂಥನ, ಶಿವನಂದಿ, ಭದ್ರಕಾಳಿ, ದಕ್ಷಿಣಾ ಮೂರ್ತಿ, ಮಲೇಷಿಯಾ, ಗರುಡ ವಾಹನ, ಆನೆ ಮುಖ, ಈಶ್ವರ ಗಣಪತಿ, ಡಮರುಗ ಗಣಪತಿ, ಗರುಡವಾಹನ, ರಾಮನ ಅವತಾರ, ಗೋಪಾಲಕೃಷ್ಣ, ಮುಂಬೈ ಸಿದ್ಧಿ ವಿನಾಯಕ ಗಣಪತಿ, ದಕ್ಷಿಣ ಮೂರ್ತಿ ಗಣಪತಿ ಸೇರಿ ಸಾಂಪ್ರದಾಯಕ ಚೌತಿ, ಗಣಪ ಸೇರಿ 50ಕ್ಕೂ ಹೆಚ್ಚು ಹಲವು ರೂಪದಲ್ಲಿ ಗಣಪತಿ ಮೂರ್ತಿಗಳನ್ನು ಮಲ್ಲಣ್ಣರ ಪುತ್ರ ಎಂ.ಗಣೇಶ್, ನಂಜುಂಡಸ್ವಾಮಿ, ಗಿರೀಶ್, ಮತ್ತು ಹೇಮಂತ್ ಕುಮಾರು ಹಾಗೂ ಕುಟುಂಬ ತಯಾರಿಸುತ್ತದೆ. ಈ ಬಾರಿ ಗಣಪತಿ ವಿಷ್ಣುವಿಗೆ ಕ್ಷಮಾಪಣೆ ಕೇಳುತ್ತಿರುವುದು, ವಿಶ್ವರೂಪ, ನರಸಿಂಹಸ್ವಾಮಿ, ಕಾಳಿಂಗ ಮರ್ದನ, ಮಲೇಶಿಯಾ ಮುರುಘ ರೂಪದ ಗಣಪತಿ ಆಕರ್ಷಣೆಯಾಗಿದೆ.
ಅಭಿರುಚಿ ಬೆಲೆಗೆ ತಕ್ಕಂತೆ ಮೂರ್ತಿ ಅರ್ಧ ಅಡಿ, ಒಂದು ಅಡಿ, ಒಂದೂವರೆ ಅಡಿ, ಎರಡು ಅಡಿ ಗಣಪನ ಮೂರ್ತಿಗಳನ್ನು ಅಚ್ಚುಗಳ ಮೂಲಕವೇ ತಯಾರಿಸಲಾಗುತ್ತದೆ. ಆದರೆ ಮೂರು ಅಡಿಯಿಂದ ಹದಿನೈದು ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಕೈಯಿಂದಲೇ ತಯಾರಿಸುವುದು ಮಲ್ಲಣ್ಣ ಕುಟುಂಬದ ವಿಶೇಷ. 50 ರೂ.ನಿಂದ 50-60 ಸಾವಿರ ರೂ. ಬೆಲೆಯ ಗಣಪನ ಮೂರ್ತಿಗಳು, ಅದರಲ್ಲೂ ಗ್ರಾಹಕರ ಅಭಿರುಚಿ, ಬೆಲೆಗೆ ತಕ್ಕಂತೆ ಗಣಪತಿ ಮೂರ್ತಿಗಳನ್ನು ನಿರ್ಮಿಸಲಾಗುತ್ತದೆ.
ಈಬಾರಿ ಹೆಚ್ಚು ಮಂದಿ ಗಣಪತಿ ಮೂರ್ತಿ ಪ್ರತಿಷ್ಠಾಪಿ ಸುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ. ಆದರೆ ಗಣಪತಿ ತಯಾರಿಸುವ ವೇಳೆ ಹಣಕಾಸಿನ ನೆರವು ಅಗತ್ಯ. ತಾಲೂಕು ಆಡಳಿತ ಕಲಾವಿದರ ಪ್ರತಿಭೆ ಗುರುತಿಸುತ್ತಿಲ್ಲ. ಗಣೇಶ ಮೂರ್ತಿ ತಯಾರಿಕೆಗೆ ಬೇಕಾದ ಸಾಮಗ್ರಿಗಳು ದುಬಾರಿಯಾಗಿದ್ದರೂ ಹಳೇ ದರಕೆ ಗಣಪತಿ ಮೂರ್ತಿ ನೀಡಲಾಗುತ್ತಿದೆ. ಈ ಸಂಬಂಧ ಸರ್ಕಾರ ಕಲಾವಿದರ ನೆರವಿಗೆ ಧಾವಿಸಿದರೆ ಕಲಾವಿದರು ಉಳಿಯಲು ಸಾಧ್ಯ. ಇಲ್ಲದಿದ್ದರೆ ಕಲಾವಿದರ ಬದುಕು ದುಸ್ತರವಾಗಲಿದೆ. ಎಂ.ಗಣೇಶ್ ಕಲಾವಿದ
ಮಾಗಡಿ ಪಟ್ಟಣದಲ್ಲಿ ರಾಜ್ಯಕ್ಕೆ ಮಾದರಿಯಾಗುವ ಗಣಪತಿ ತಯಾರಿಸುವ ಕಲಾವಿದರಿದ್ದಾರೆ. ಆದರೆ ಕಲಾವಿದರ ಕುಟುಂಬಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ಕಲಾವಿದರ ನೆರವಿಗೆ ಸ್ಪಂದಿಸುವ ಅಗತ್ಯವಿದೆ. ಡಾ.ಪ್ರಸನ್ನ ಗೌಡ, ರಾಜ್ಯಾಧ್ಯಕ್ಷ ರಾಜ್ಯ ಕಟ್ಟಡ ಮತ್ತು ಆಸಂಘಟಿತ ಕಾರ್ಮಿಕರ ಒಕ್ಕೂಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net