

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆ ತೀವ್ರ ಹದಗೆಟ್ಟಿದ್ದ ಎಲ್ಲೇಮಾಳ ಮಲೆಮಹದೇಶ್ವರ ಬೆಟ್ಟದ ರಸ್ತೆ ಮರು ಡಾಂಬರೀಕರಣಗೊಳ್ಳುತ್ತಿದೆ. ಇದರಿಂದ ಭಕ್ತರು ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ. ಜತೆಗೆ ಸ್ಥಳೀಯರಲ್ಲೂ ಸಮಾಧಾನ ತರಿಸಿದೆ.
ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮ.ಬೆಟ್ಟಕ್ಕೆ ದೀಪಾವಳಿ, ಮಹಾಶಿವರಾತ್ರಿ, ಮಹಾಲಯ ಅಮಾವಾಸ್ಯೆ, ಯುಗಾದಿ ಹಾಗೂ ಇನ್ನಿತರೆ ಜಾತ್ರಾ ವೇಳೆ ಹಾಗೂ ವಿಶೇಷ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಹನೂರಿನ ಮೂಲಕ ತೆರಳುತ್ತಾರೆ. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ಹನೂರು ಮ.ಬೆಟ್ಟದ ಮಾರ್ಗದ ರಸ್ತೆ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿ ತೀರಾ ಹದಗೆಟ್ಟಿತ್ತು. ಮಳೆಗಾಲದ ವೇಳೆ ಗುಂಡಿಗಳಲ್ಲಿ ನೀರು ನಿಲ್ಲುವಂತಾಗಿತ್ತು. ಭಕ್ತರ ಒತ್ತಾಯದ ಮೇರೆಗೆ ಆಗ್ಗಾಗ್ಗೆ ತೇಪೆ ಹಾಕಲಾಗುತ್ತಿದ್ದರೂ, ಗುಂಡಿಗಳು ಆಗಿಂದ್ದಾಗೆ ಬಾಯ್ತೆರೆಯುತ್ತಿದ್ದವು. ಇದರಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿತ್ತು. ಬೈಕ್ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೀಳುವ ಪ್ರಕರಣಗಳು ನಡೆಯುತ್ತಿದ್ದವು. ಅಲ್ಲದೆ ಹೆಚ್ಚಿನ ಅಪಘಾತ ಪ್ರಕರಣಗಳು ನಡೆಯುತ್ತಿದ್ದವು. ಮಾದಪ್ಪನನ್ನು ನಂಬಿ ಬಂದ ಭಕ್ತರು ಸಾವು, ನೋವಿನ ಯಾತನೆಯನ್ನು ಅನುಭವಿಸಿದ್ದರು. ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ಭಕ್ತ ಸಮುದಾಯ ಅಸಮಧಾನ ಹೊರಹಾಕುತ್ತಿದ್ದರು. ಜತೆಗೆ ಸಾಮಾಜಿಕ ಜಾಲ ತಾಣದಲ್ಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.
6 ತಿಂಗಳ ಹಿಂದೆ ಹನೂರಿನಿಂದ ಎಲ್ಲೇಮಾಳದವರೆಗೆ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ಎಲ್ಲೇಮಾಳದಿಂದ ಮ.ಬೆಟ್ಟದ ರಸ್ತೆ ಹಾಗೆ ಉಳಿದಿದ್ದು, ಭಕ್ತರು ಸಂಚರಿಸಲು ಕಷ್ಟ ಸಾಧ್ಯವಾಗುತ್ತಿತ್ತು. ಜನವರಿ 2ನೇ ವಾರದಲ್ಲಿ ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವುದರಿಂದ ಈ ರಸ್ತೆ ಇದೀಗ ಮರು ಡಾಂಬರೀಕರಣಗೊಳ್ಳುತ್ತಿದೆ. ಇದರಿಂದ ಈ ಹದಗೆಟ್ಟ ರಸ್ತೆಯಿಂದ ತಾತ್ಕಲಿಕವಾಗಿ ಮುಕ್ತಿ ಸಿಕ್ಕಿದಂತಾಗಿದ್ದು, ಭಕ್ತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಕೆ.ಶಿಪ್ ಯೋಜನೆಯಡಿ ಅಭಿವೃದ್ಧಿಗೆ ಕ್ರಮ
ರಾಜ್ಯದ ವಿವಿಧೆಡೆಯಿಂದ ಮ.ಬೆಟ್ಟಕ್ಕೆ ಆಗಮಿಸುತ್ತಿದ್ದ ಭಕ್ತರು ಹಾಗೂ ಸ್ಥಳೀಯರು ಸಹ ಈ ಮಾರ್ಗದ ರಸ್ತೆಯ ದುಸ್ಥಿತಿಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆ ಶಾಸಕ ಎಂ.ಆರ್. ಮಂಜುನಾಥ್ ಅವರು ಕಾಳಜಿ ವಹಿಸಿದ ಪರಿಣಾಮ ಪಿಡ್ಲೂೃಡಿ ಇಲಾಖೆಯ ಹೆದ್ದಾರಿ ನವೀಕರಣ ಯೋಜನೆಯಡಿ 15 ಕೋಟಿ ರೂ ವೆಚ್ಚದಲ್ಲಿ ಹನೂರಿನಿಂದ ಮ.ಬೆಟ್ಟದವರೆಗೂ ತಾತ್ಕಲಿಕವಾಗಿ ಮರು ಡಾಂಬರೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಎಲ್ಲೇಮಾಳ-ಕೌದಳ್ಳಿ, ಕೌದಳ್ಳಿ-ತಾಳುಬೆಟ್ಟ ಹಾಗೂ ಮ.ಬೆಟ್ಟ-ತಾಳುಬೆಟ್ಟ ಮಾರ್ಗದಲ್ಲಿ 3 ಹಂತದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಭರದಿಂದ ಸಾಗುತ್ತಿದೆ. ಅಲ್ಲದೇ ಶಾಸಕ ಎಂ.ಆರ್. ಮಂಜುನಾಥ್ ಅವರು ಲಕ್ಷಾಂತರ ಭಕ್ತರು ಸಂಚರಿಸುವ ಈ ರಸ್ತೆಯನ್ನು ಕೆ.ಶಿಪ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಡಿಪಿಆರ್ ಸಿದ್ಧವಾಗಿದ್ದು, ಸರ್ಕಾರದಿಂದ ಅನುಮೋದನೆಯಾಗಬೇಕಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ರಸ್ತೆ ಅಭಿವೃದ್ಧಿಯಾಗಲಿದೆ. ಇದರಿಂದ ಹಲವು ವರ್ಷಗಳಿಂದ ಭಕ್ತರು ಅನುಭವಿಸುತ್ತಿದ್ದ ಸಂಚಾರದ ಯಾತನೆಯಿಂದ ನಿಟ್ಟುಸಿರು ಬಿಟ್ಟಂತಾಗುತ್ತದೆ.