ಕನ್ನಡ ಮಕ್ಕಳಿಗೆ ಮಲಯಾಳಂ ಶಿಕ್ಷಕಿ : ಕೋರಿಕಂಡ ಅಂಗನವಾಡಿಯಲ್ಲಿ ಅಕ್ಷರವರಿಯದ ಪುಟಾಣಿಗಳಿಗೆ ಪರಭಾಷೆ ಹೇರಿಕೆ ಯತ್ನ

kannada
ಕೋರಿಕಂಡ ಅಂಗನವಾಡಿ ಕೇಂದ್ರ.
Published on

ಮುಳ್ಳೇರಿಯ: ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲೆ ಆಡಳಿತ ವರ್ಗದ ಮಲತಾಯಿ ಧೋರಣೆ ಮತ್ತೆ ಮುಂದುವರಿದಿದ್ದು, ಇಲ್ಲಿಯ ಭಾಷಾ ಅಲ್ಪಸಂಖ್ಯಾಕ ಜನರ ಬವಣೆಗೆ ಕೊನೆಯಿಲ್ಲದಾಗಿದೆ. ಕಾಲೇಜು, ಹೈಸ್ಕೂಲು, ಪ್ರಾಥಮಿಕ ವಿಭಾ ಗಗಳ ಕನ್ನಡ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರನ್ನು ನೇಮಿಸಿ ಗಡಿನಾಡು ಕಾಸರಗೋಡಿನ ಕನ್ನಡಿಗರನ್ನು ಗೋಳು ಹೊಯ್ದಿರುವ ಕೇರಳ ಸರ್ಕಾರ ಇದೀಗ ಅಂಗನವಾಡಿ ಶಾಲೆಗೆ ಶಿಕ್ಷಕಿಯರ ನೇಮಕದಲ್ಲೂ ಅನ್ಯಾಯವೆಸಗಿದೆ.

ಕಾರಡ್ಕ ಬ್ಲಾಕ್ ವ್ಯಾಪ್ತಿಯ ಗಡಿಗ್ರಾಮ ದೇಲಂಪಾಡಿ ಪಂಚಾಯಿತಿಯ ಅಡೂರು ಸಮೀಪದ ಕೋರಿಕಂಡ ಎಂಬಲ್ಲಿಯ ಅಂಗನವಾಡಿಯಲ್ಲಿ ಮಲಯಾಳ ಮಾತ್ರ ಬಲ್ಲ ಶಿಕ್ಷಕಿಯನ್ನು ನೇಮಿಸಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಕನ್ನಡ, ತುಳು, ಮರಾಠಿ, ಕೊಂಕಣಿ ಮೊದಲಾದ ಮಾತೃಭಾಷೆಯ ಪುಟಾಣಿಗಳು ಮಲಯಾಳಂ ಅರ್ಥವಾಗದೆ ಕಣ್ಣು ಬಾಯಿ ಬಿಟ್ಟು ನೋಡುವಂತಾಗಿದೆ.

ನಡೆದಿರುವುದೇನು?: ಕನ್ನಡ, ತುಳು ಭಾಷಿಕರೇ ಹೆಚ್ಚಿರುವ ದೇಲಂಪಾಡಿ ಗ್ರಾಪಂ ವ್ಯಾಪ್ತಿಗೆ ಬರುವ ಅಡೂರಿನ ಕೋರಿಕಂಡ ಅಂಗನವಾಡಿಯಲ್ಲಿ ಒಟ್ಟು 16 ಮಕ್ಕಳಿದ್ದು ಅವರಲ್ಲಿ 14 ಮಂದಿ ಕನ್ನಡ/ತುಳು ಭಾಷಿಗರು. ಇಲ್ಲಿನ ಶಿಕ್ಷಕಿ ಅನಾರೋಗ್ಯ ಕಾರಣ ರಜೆಯಲ್ಲಿರುವುದರಿಂದ ಆರು ತಿಂಗಳ ಅವಧಿಗೆ ಮಲಯಾಳಂ ಭಾಷಿಗ ಶಿಕ್ಷಕಿಯನ್ನು ನೇಮಿಸಲಾಗಿದೆ. ಅವರಿಗೆ ಮಲಯಾಳಂ ಬಿಟ್ಟರೆ ಬೇರೆ ಯಾವ ಭಾಷೆಯೂ ಬರುವುದಿಲ್ಲ.

ರಜೆ ಮೇಲೆ ತೆರಳಿರುವ ಶಿಕ್ಷಕಿ ಕೆಲಸಕ್ಕೆ ರಾಜೀನಾಮೆ ನೀಡಿದರೆ, ಮಲಯಾಳಂ ಭಾಷಿಕ ಶಿಕ್ಷಕಿಯನ್ನೇ ಕಾಯಂಗೊಳಿಸುವುದು ಸಾಮಾನ್ಯ ನಿಯಮ. ಇದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಅಂಗನವಾಡಿ ಸಮಿತಿ ಮೂಲಕ ಶಿಕ್ಷಕಿಯರ ನೇಮಕಾತಿ ನಡೆಯುತ್ತಿತ್ತು. ದ್ವಿಭಾಷೆ ಗೊತ್ತಿದ್ದವರನ್ನೇ ನೇಮಿಸುತ್ತಿದ್ದರು. ಆದರೆ ಇದೀಗ ಶಿಶು ವಿಕಸನ ಕಚೇರಿಯಿಂದ ನೇಮಕಾತಿ ನಡೆದಿರುವುದು ಈ ಎಡವಟ್ಟಿಗೆ ಕಾರಣ ಎನ್ನಲಾಗಿದೆ.

ಕೆಲವು ವರ್ಷಗಳ ಹಿಂದೆ ಅಡೂರು ಶಾಲೆಗೆ ಮಲಯಾಳಂ ಶಿಕ್ಷಕರನ್ನು ನೇಮಕ ಮಾಡಿದ್ದ ಕೇರಳ ಸರ್ಕಾರ ಮತ್ತು ಲೋಕಸೇವಾ ಆಯೋಗದ ವಿರುದ್ಧ ವಿದ್ಯಾರ್ಥಿಗಳು ಕೇರಳದ ಹೈಕೋರ್ಟ್ ಮೊರೆಹೋದ ಪರಿಣಾಮ ಮಲಯಾಳಂ ಶಿಕ್ಷಕಿಯನ್ನು ವರ್ಗಾವಣೆ ಮಾಡಲಾಗಿತ್ತು.

ಅಳಲು ತೋಡಿಕೊಂಡ ತಾಯಿ

ಸರ್ಕಾರಿ ಕಚೇರಿಗಳಲ್ಲಿ ಕುಳಿತಿರುವ ಮಲಯಾಳಿ ಅಧಿಕಾರಿಗಳಿಗೆ ಮಕ್ಕಳ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕಲಿಯುವುದು ಪ್ರತಿಯೊಂದು ಮಗುವಿನ ಹಕ್ಕು. ಅಂಥದ್ದರಲ್ಲಿ ಅಂಗನವಾಡಿಯಿಂದಲೇ ಮಗುವಿನ ಮೇಲೆ ಮಲಯಾಳ ಹೇರಿಕೆ ಮಾಡಿದರೆ ಕನ್ನಡ ಕಲಿಯಬೇಕಾದ ಮಕ್ಕಳು ಏನು ಮಾಡಬೇಕು? ಎಂದು ಅಂಗನವಾಡಿ ವಿದ್ಯಾರ್ಥಿಯ ತಾಯಿ ನಯನಾ ವಿಜಯವಾಣಿ ಜತೆ ಅಲವತ್ತುಕೊಂಡಿದ್ದಾರೆ.

ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ವಾಸ

ಪ್ರಸ್ತುತ ಕೋರಿಕಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ. ಅದೀಗ ಬಾಡಿಗೆ ಮನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ. ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯಾಡಳಿತ ಮತ್ತು ಐಸಿಡಿಎಸ್ ಹಣ ಮೀಸಲಿಟ್ಟಿದೆ ಎಂದು ತಿಳಿದುಬಂದಿದೆ.

ತಾನು ಕಾಸರಗೋಡು ವ್ಯಾಪ್ತಿಗೆ ಇದೇ ಮೊದಲ ಬಾರಿ ಉದ್ಯೋಗಿಯಾಗಿ ಮೂರು ತಿಂಗಳ ಹಿಂದೆಯಷ್ಟೇ ನೇಮಕಗೊಂಡು ಬಂದಿರುವೆ. ಇಲ್ಲಿಯ ಭಾಷಾ ಸಮಸ್ಯೆಗಳ ಬಗ್ಗೆ ಈವರೆಗೆ ಯಾರೂ, ಏನೊಂದೂ ಮಾಹಿತಿ ನೀಡಿಲ್ಲ. ಈ ನೇಮಕಾತಿ ನಾನು ಮಾಡಿದ್ದು ಹೌದಾದರೂ, ಪಾಲಕರು ದೂರು ನೀಡಿದ್ದಲ್ಲಿ ಪರಿಶೀಲಿಸಲಾಗುವುದು. - ಶೀಬಾ, ಐಸಿಡಿಎಸ್ ಕಾರಡ್ಕ ಬ್ಲಾಕ್ ಮೇಲ್ವಿಚಾರಕಿ ಅಂಗನವಾಡಿಯಲ್ಲಿ ಕನ್ನಡ ಬಾರದ ಶಿಕ್ಷಕಿಯ ನೇಮಕಾತಿ ವಿಚಾರ ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದು ಕಾಸರಗೋಡಿನಲ್ಲಿ ಕನ್ನಡ ಭಾಷಿಕರ ಸಾಂವಿಧಾನಿಕ ಹಕ್ಕಿಗೆ ಎಸಗಿರುವ ಅಪಚಾರವಾಗಿದ್ದು, ಅಕ್ಷಮ್ಯ. ಈ ಬಗ್ಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಎರಡೂ ರಾಜ್ಯ ಸರ್ಕಾರಗಳಿಗೂ ಕ್ರಮಕೈಗೊಳ್ಳಲು ವ್ಯವಸ್ಥೆಮಾಡಲಾಗುವುದು. - ಎ.ಆರ್.ಸುಬ್ಬಯ್ಯಕಟ್ಟೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net