

ಬೆಂಗಳೂರು: ಮಕ್ಕಳ ಬೆಳವಣಿಗೆ ಬಗ್ಗೆ ಗಮನ ನೀಡುವ ಪಾಲಕರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಖಿಲ ಕರ್ನಾಟಕ ಮಕ್ಕಳ ಕೂಟ ವತಿಯಿಂದ ಮಂಗಳವಾರ ಆಯೋಜಿಸಿದ್ದ "ಬೇಸಿಗೆ ರಜೆಯ ಸಾಂಸತಿಕ ಶಿಕ್ಷಣ ಹಾಗೂ ಮನರಂಜನಾ ಶಿಬಿರ'ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳ ಬೆಳವಣಿಗೆ ಬಗ್ಗೆ ಗಮನಹರಿಸುತ್ತಿದ್ದೀರಾ ಎಂದು ಈಗಿನ ಪಾಲಕರಮನ್ನು ಪ್ರಶ್ನಿಸಿದರೆ, "ಮಕ್ಕಳು ಅವರಷ್ಟಕ್ಕೇ ಬೆಳೆಯಲಿ.. ಬೇಕಾದ್ದು ಮಾಡಿಕೊಳ್ಳಲಿ.. ದೊಡ್ಡ ಶಾಲೆಗೆ ಸೇರಿಸಿದ್ದೇವೆ, ಬುದ್ಧಿವಂತರಾಗುತ್ತಾರೆ' ಎಂಬ ವಾದ ಮಂಡಿಸುತ್ತಾರೆ. ಆದರೆ ಯಾವ ದಾರಿಯಲ್ಲಿ ಜ್ಞಾನ ಸಂಪಾದಿಸುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಈ ಬಗ್ಗೆ ಗಂಭೀರ ತಳೆಯಬೇಕಿದೆ ಎಂದರು.
ಮಕ್ಕಳ ಶೈಕ್ಷಣಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೂರಕವಾಗಿ ಬೇಸಿಗೆ ರಜೆಯಲ್ಲಿ "ಮಕ್ಕಳ ಕೂಟ' ಆಯೋಜಿಸಿರುವ ಶಿಬಿರ ಅರ್ಥಪೂರ್ಣವಾಗಿದೆ. ಈ ಮೂಲಕ ಉತ್ತಮ ಭವಿಷ್ಯಕ್ಕೆ ಬೇಕಾಗಿರುವ ಮೌಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಕರಗತ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮೌಲ್ಯಯುತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಶಿಸ್ತು ಹಾಗೂ ಮಾನಸಿಕ ಸದೃಢತೆ ಮೈಗೂಡಿಕೊಳ್ಳುತ್ತದೆ ಎಂದರು.
ಮಾರುತಿ ಮೆಡಿಕಲ್ಸ್ನ ಮಾಲೀಕ ಮಹೇಂದ್ರ ಮುನ್ನೋತ್ ಮಾತನಾಡಿ, ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಬೆಳವಣಿಯಲ್ಲಿ ರಾಜಕೀಯ ಹಸ್ತಕ್ಷೇಪ ಆಗಬಾರದು. ಸ್ಪರ್ಧಾತ್ಮಕ ಬೆಳವಣಿಗೆಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಿಕೊಡುವ ಕೆಲಸ ಆಗಬೇಕು. ಇದರಿಂದಾಗಿ ಮಕ್ಕಳು ಭವಿಷ್ಯದಲ್ಲಿ ಸಾಧಕರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಮೋಟಾರ್ಸ್ ಓನರ್ಸ್ ಕನ್ಸೂಮರ್ ಕೋ&ಆಪರೇಟಿವ್ ಸೊಸೈಟಿ ಅಧ್ಯಕ್ಷ ಎ.ಪಿ. ಗುಣಶೇಖರ್, ಮಕ್ಕಳ ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ವಿ. ವೆಂಕಟಾಚಲಂ, ಸಹ ಕಾರ್ಯದರ್ಶಿ ಎಂ. ರಾವೇಂದ್ರ, ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂದ ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷ ಡಾ.ಕೆ. ಕೃಷ್ಣಮೂರ್ತಿ ಮತ್ತಿತರರಿದ್ದರು.
ನಾನು ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಲೋಕಾಯುಕ್ತ ಇಲಾಖೆಗೆ ಬಂದಾಗ ಸಮಾಜದಲ್ಲಿ ಅನ್ಯಾಯಗಳು ಯಾಕೆ ನಡೆಯುತ್ತಿವೆ ಎಂಬುದನ್ನು ಮನಗಂಡೆ. ಹಿಂದೆ ತಪ್ಪಿತಸ್ಥರನ್ನು ಸಮಾಜ ಬಹಿಷ್ಕರಿಸುತ್ತಿತ್ತು, ಒಳ್ಳೆಯ ಕೆಲಸ ಮಾಡಿದವರನ್ನು ಪುರಸ್ಕರಿಸುತ್ತಿತ್ತು. ಹೀಗಾಗಿ ಅನ್ಯಾಯ ಎಸಗಲು ಜನ ಹಿಂದೇಟು ಹಾಕುತ್ತಿದ್ದರು. ಆದರೆ ಇಂದಿನ ಸಮಾಜದಲ್ಲಿ ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸಸಲಾಗುತ್ತಿದೆ. ನೈತಿಕ ಮೌಲ್ಯಗಳಿಗೆ ಬೆಲೆ ನೀಡುವ ನೈಜ ಸಮಾಜ ನಿರ್ಮಾಣ ಪ್ರಸ್ತುತ ಕಾಲದ ಅಗತ್ಯವಾಗಿದೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.