

ಸಿದ್ದಾಪುರ: ಮೈದಾನದ ಕೊರತೆ ಇರುವ ಸಿದ್ದಾಪುರ ಭಾಗದಲ್ಲಿ ನೂತನ ಟರ್ಫ್ ಮೈದಾನದಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಅವಕಾಶ ದೊರೆಯಲಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ ಮಾದಂಡ ತಿಮ್ಮಯ್ಯ ಕರೆ ನೀಡಿದರು.
ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ನೂತನವಾಗಿ ಕೃತಕ ಹುಲ್ಲಿನಿಂದ ನಿರ್ಮಾಣವಾದ ಸ್ಟೈಕರ್ಸ್ ಎಡ್ಜ್ ಟರ್ಫ್ ಮೈದಾನವನ್ನು ಗುರವಾರ ಉದ್ಘಾಟಿಸಿ ಮಾತನಾಡಿದರು. ಸಿದ್ದಾಪುರ ಭಾಗದಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದು, ಮೈದಾನದ ಕೊರತೆಯಿಂದ ದೂರದ ಊರುಗಳಿಗೆ ತೆರಳಿ ಆಟವಾಡಬೇಕಿತ್ತು. ನೂತನ ಮೈದಾನದಿಂದ ಸ್ಥಳೀಯ ಪ್ರತಿಭೆಗಳಿಗೆ ಉಪಯೋಗವಾಗಲಿದೆ ಎಂದರು.
ಕಾರ್ಮಿಕ ಮುಖಂಡ ಪಿ.ಆರ್ ಭರತ್ ಮಾತನಾಡಿ, ಸಿದ್ದಾಪುರ ಭಾಗದಲ್ಲಿ ಹಲವು ವರ್ಷಗಳಿಂದ ಮೈದಾನವಿಲ್ಲದೆ ಕ್ರೀಡಾಪಟುಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಜೀವನದಲ್ಲಿ ಕ್ರೀಡೆ ಅತ್ಯಗತ್ಯವಾಗಿದ್ದು, ಸರ್ಕಾರ ಗ್ರಾಮೀಣ ಮಟ್ಟದಲ್ಲಿ ಅಟದ ಮೈದಾನ ನಿರ್ಮಿಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಎ.ಎಸ್.ಮುಸ್ತಫ ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಕ್ರೀಡಾಕೂಟಗಳು ನಡೆಯದೇ ಯುವ ಜನತೆ ಮಾದಕ ವಸ್ತು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಯುವಕರು ಕ್ರೀಡೆಯಲ್ಲಿ ತೊಡಗಿ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಬೇಕು ಎಂದರು.
ನೆಲ್ಯಹುದಿಕೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಎ.ಕೆ ಹಕೀಂ, ಹಿರಿಯ ವಾಲಿಬಾಲ್ ಪಟು ಥೋಮಸ್, ಉದ್ಯಮಿ ಹಸೈನಾರ್ ಹಾಜಿ, ಪ್ರಮುಖರಾದ ರೆಜಿತ್ ಕುಮಾರ್, ಹುಸೈನ್, ಎಂ.ಎ ಅಜೀಜ್, ಹನೀಫ ಹಾಜರಿದ್ದರು.