

ಹರಪನಹಳ್ಳಿ: ಕೃತಕ ಅಭಾವ ಸೃಷ್ಟಿಸಿ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಯೂರಿಯಾ ಗೊಬ್ಬರ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ವಿ.ಸಿ.ಉಮೇಶ್ ಹೇಳಿದರು.
ಇದನ್ನೂ ಓದಿ:ಎರಡು ದಿನದಲ್ಲಿ ಯೂರಿಯಾ ಗೊಬ್ಬರ ವಿತರಿಸಿ
ಪಟ್ಟಣದ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ರಸಗೊಬ್ಬರ ಖರೀದಿಸಿದ ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ಅಂಗಡಿ ಹೊರಗೆ ದಾಸ್ತಾನು ಲಭ್ಯತೆ ಹಾಗೂ ದರಪಟ್ಟಿ ಹಾಕಬೇಕು. ತೂಕದಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಕಳಪೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರು ಖಾಸಗಿ ಮಾರಾಟ ಮಳಿಗೆಗಳಿಂದ ಬಿತ್ತನೆಬೀಜ ಹಾಗೂ ರಸಗೊಬ್ಬರ ಖರೀದಿಸಿದಾಗ ತಪ್ಪದೆ ರಸೀದಿ ಪಡೆಯಬೇಕು. ಗರಿಷ್ಠ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಬೇಕು. ತಾಲೂಕಿನಲ್ಲಿ ಯೂರಿಯಾ ಸಹಿತ ಅಗತ್ಯ ರಸಗೊಬ್ಬರ ಪೂರೈಕೆ ಆಗಲಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ. ಮಣ್ಣು ಮತ್ತು ಪರಿಸರದ ಆರೋಗ್ಯದ ದೃಷ್ಟಿಯಿಂದ ಮೇಲುಗೊಬ್ಬರವಾಗಿ ಹರಳು ರೂಪದ ಯೂರಿಯಾ, ರಸಗೊಬ್ಬರದ ಪರ್ಯಾಯವಾಗಿ ದ್ರವರೂಪದ ನ್ಯಾನೋ ಯೂರಿಯಾ ಬಳಸುವುದರಿಂದ ಉತ್ತಮ ಬೆಳೆ ಮತ್ತು ಹೆಚ್ಚಿನ ಇಳುವರಿ ಪಡೆಯಬಹುದು ಎಂದು ವಿ.ಸಿ.ಉಮೇಶ್ ತಿಳಿಸಿದರು.