

ಶಿಗ್ಗಾಂವಿ: ಪಟ್ಟಣದ ಮಹಾನಂದಿ ಎಫ್ಪಿಒ ಸದಸ್ಯ ರೈತರು ಯೂರಿಯಾ ಗೊಬ್ಬರದ ಕೊರತೆಯಿಂದ ಆಕ್ರೋಶಗೊಂಡು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತರು, ಮಹಾನಂದಿ ಎಫ್ಪಿಒದಲ್ಲಿ ಸಾವಿರಕ್ಕೂ ಹೆಚ್ಚಿನ ರೈತರು ಸದಸ್ಯರಿದ್ದು, 300 ಟನ್ಗಿಂತಲೂ ಹೆಚ್ಚಿನ ಯೂರಿಯಾ ಗೊಬ್ಬರದ ಬೇಡಿಕೆ ಇದೆ. ಆದರೆ, ಅಧಿಕಾರಿಗಳು ಕೇವಲ 15 ಟನ್ ಯೂರಿಯಾ ಗೊಬ್ಬರವನ್ನು ನೀಡಿದ್ದಾರೆ. ಬಿತ್ತನೆ ಸಮಯದಲ್ಲಿ ಡಿಎಪಿ ಗೊಬ್ಬರದ ಕೊರತೆಯಾಗಿ, ಪರ್ಯಾಯ ಗೊಬ್ಬರಗಳನ್ನು ಬಳಸುವಂತಾಗಿದೆ. ಈಗ ಬೆಳೆಗಳು ಬೆಳೆದು ನಿಂತಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಭೂಮಿ ಜವಳಾಗುತ್ತಿದೆ.
ಬೆಳೆ ಉಳಿಸಿಕೊಳ್ಳಲು ಯೂರಿಯಾ ಗೊಬ್ಬರದ ಅವಶ್ಯಕತೆ ಇದೆ. ಸರ್ಕಾರದಿಂದ ರಸಗೊಬ್ಬರ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಮಳೆಯಾಶ್ರಿತ ಬೇಸಾಯ ಮಾಡುತ್ತಿರುವ ರೈತರಿಗೆ ಮಳೆಗಾಲದ ಈ ಇಳುವರಿಯೇ ಜೀವನಾಧಾರವಾಗಿದೆ. ಅತಿವೃಷ್ಟಿ ಮತ್ತು ರಸಗೊಬ್ಬರಗಳ ಕೊರತೆಯಿಂದ ತಾಲೂಕಿನ ರೈತರು ಆತಂಕಕ್ಕೆ ಸಿಲುಕುವಂತಾಗಿದೆ. ಅಧಿಕಾರಿಗಳು ಯೂರಿಯಾ ಗೊಬ್ಬರವನ್ನು ಸೋಮವಾರದೊಳಗೆ ವಿತರಿಸಬೇಕು ಎಂದು ಒತ್ತಾಯಿಸಿದರು.
ಖಾಸಗಿ ವ್ಯಾಪಾರಿಗಳಿಗೆ ಬೇಕಾದಷ್ಟು ಗೊಬ್ಬರದ ಚೀಲಗಳು ಅವಧಿಗೂ ಮುನ್ನವೆ ಬರುತ್ತವೆ. ರೈತರೇ ಕಟ್ಟಿಕೊಂಡಿರುವ ಎಫ್ಪಿಒ, ಸ್ವಸಹಾಯ ಸಂಘ ಸೇರಿದಂತೆ ಇತರ ಸಂಸ್ಥೆಗಳಿಗೆ ಗೊಬ್ಬರದ ಕೊರತೆ ಮಾಡಲಾಗುತ್ತಿದೆ. ಬೇರೆ ತಾಲೂಕಿನ ವ್ಯಾಪಾರಿಗಳು ನಮ್ಮ ತಾಲೂಕಿನಲ್ಲಿ ಗೊಬ್ಬರ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಡಿಎಪಿ ಗೊಬ್ಬರದ ನಂತರ ಯೂರಿಯಾ ಗೊಬ್ಬರಕ್ಕೂ ಲಿಂಕ್ ಮಾರಾಟ ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ರೈತರು ದೂರಿದರು.
ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ಅವರು ಅಪರ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ಲ ಅವರೊಂದಿಗೆ ದೂರವಾಣಿ ಮೂಲಕ ಸಂರ್ಪಸಿ ದಾಸ್ತಾನಿನ ಬಗ್ಗೆ ಮಾಹಿತಿ ಪಡೆದು, ಆದ್ಯತೆ ಮೇರೆಗೆ ಶೀಘ್ರವೇ ಮಹಾನಂದಿ ಎಫ್ಪಿಒಕ್ಕೆ ಯೂರಿಯಾ ಗೊಬ್ಬರ ಪೂರೈಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಬಸವರಾಜ ಪೂಜಾರ, ಬಸವರಾಜ ಅಜ್ಜಂಪೂರ, ಗುಡ್ಡಪ್ಪ ಸುಣಗಾರ, ಈರಣ್ಣ ಬಳಿಗಾರ, ಹುತ್ತನಗೌಡ್ರ ಪಾಟೀಲ, ಸಂತೋಷ ನವಲಗುಂದ, ಉಮಾಶಂಕರ ನವಲಗುಂದ, ಮನೋಜ ದ್ಯಾಮಣ್ಣವರ, ಶಿದ್ದಪ್ಪ ಮಿಳ್ಳಳ್ಳಿ, ಖಾದರಬಾಷಾ, ಸಂತೋಷ ಕಟಗಿ, ಸೂರಜ್ ಮರಿದ್ಯಾಮಣ್ಣನವರ, ವಿನಯಕುಮಾರ ಗೊಜನೂರ, ಇತರರಿದ್ದರು.