

ಕುಶಾಲನಗರ: ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸಲು ಕ್ರಮವಹಿಸಬೇಕು ಎಂದು ಸಂಸದ ಯದುವೀರ್ ಒಡೆಯರ್ ಅವರಿಗೆ ಕುಶಾಲನಗರದ ವಿವಿಧ ಪಕ್ಷದ ಪ್ರಮುಖರು ಮನವಿ ಸಲ್ಲಿಸಿದರು.
ಕುಶಾಲನಗರ ಕೊಡಗು ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸುವುದರಿಂದ ಪ್ರವಾಸೋದ್ಯಮಕ್ಕೆ ಹಾಗೂ ಕಾಫಿ, ಏಲಕ್ಕಿ, ಸಾಂಬಾರ ಪದಾರ್ಥಗಳ ಸರಕು ಸಾಗಣೆಗೆ ಅನುಕೂಲವಾಗುತ್ತದೆ ಎಂದು ಬಿಜೆಪಿಯ ಎಂ.ಡಿ.ಕೃಷ್ಣಪ್ಪ, ಕಾಂಗ್ರೆಸ್‌ನ ಆರ್.ಕೆ.ನಾಗೇಂದ್ರಬಾಬು, ಜೆಡಿಎಸ್‌ನ ವಿ.ಎಸ್.ಆನಂದ್‌ಕುಮಾರ್, ವಸಂತ, ಗಿರೀಶ್ ಸಂಸದರೊಂದಿಗೆ ಚರ್ಚಿಸಿದರು.
ರೈಲು ನಿಲ್ದಾಣವನ್ನು ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ. ಕೂಡಿಗೆಯಲ್ಲಿ ನಿರ್ಮಾಣಗೊಳ್ಳಲಿರುವ ಮಿನಿ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲಿದೆ. ಹೊಳೆನರಸೀಪುರ, ಅರಕಲಗೂಡು ರೈಲ್ವೆ ಮಾರ್ಗಕ್ಕೂ ಜೋಡಣೆ ಮಾಡಲು ಅನುಕೂಲವಾಗುತ್ತದೆ ಎಂದು ಪ್ರಮುಖರು ವಿವರಿಸಿದರು.
ಪ್ರಸ್ತುತ ನಿಗದಿಗೊಳಿಸಿರುವ ರೈಲ್ವೆ ಯೋಜನೆಯಿಂದ ನಿಸರ್ಗಧಾಮ ಉದ್ಯಾನವನಕ್ಕೆ ತೊಂದರೆಯಾಗಲಿದೆ. ಅಲ್ಲದೆ ಜಿಲ್ಲೆಯ ವಿವಿಧ ಭಾಗಕ್ಕೆ ಸಂಪರ್ಕ ಕಲ್ಪಿಸಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮವಹಿಸುವಂತೆ ಮನವಿಯಲ್ಲಿ ತಿಳಿಸಿದರು.