

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಏ.24 ರಂದು ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನ್ನೆಲೆ ಅಗತ್ಯ ಸಿದ್ಧತೆ ಸಂಬಂಧ ಶಾಸಕ ಎಂ.ಆರ್.ಮಂಜುನಾಥ್ ಅವರು ಬುಧವಾರ ಮ.ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಚಿವ ಸಂಪುಟ ಸಭೆ ನಡೆಯಲಿರುವ ದೀಪದಗಿರಿ ಒಡ್ಡುವಿನ ಶ್ರೀ ಮಹದೇಶ್ವರರ ಪ್ರತಿಮೆಯ ಆವರಣದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು ಸಿದ್ಧತೆ ಕುರಿತು ರೂಪುರೇಷಗಳ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಅವರು, ಯಾವುದೇ ಲೋಪವಾಗದಂತೆ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳುವುದರ ಮೂಲಕ ಸಭೆಯ ಯಶಸ್ವಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು. ಬಳಿಕ ಉದ್ಘಾಟನೆಯಾಗಲಿರುವ 386 ವಸತಿ ಕೊಠಡಿಗಳ ಕಟ್ಟಡ ಹಾಗೂ ದೊಡ್ಡಕೆರೆ ಕಲ್ಯಾಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಒಳಚರಂಡಿ ಸ್ಥಳಕ್ಕೆ ತೆರಳಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ನೈರ್ಮಲ್ಯ ಕಾಪಾಡುವಂತೆ ಸಲಹೆ ನೀಡಿದರು. ಬಳಿಕ ಶಾಸಕರು ಬಸ್ ನಿಲ್ದಾಣದ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ನಡೆಯುತ್ತಿದ್ದ ಹುಂಡಿ ಎಣಿಕೆ ಸ್ಥಳಕ್ಕೂ ತೆರಳಿ ಪರಿಶೀಲಿಸಿದರು. ಈ ಸಂಬಂಧ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಜಿ.ಎಲ್ ಚಂದ್ರಶೇಖರ್, ಪಿಡಬ್ಲುೃಡಿ ಎಇಇ ಚಿನ್ನಣ್ಣ, ಮುಖಂಡರಾದ ಡಿ.ಕೆ ರಾಜು, ವೆಂಕಟಾಚಲ, ರಾಜಣ್ಣ, ಮಹದೇವ, ಜಯರಾಮು, ಬಸವರಾಜು, ತಂಗವೇಲು, ವೆಂಕಟೇಶ್ ಇನ್ನಿತರರು ಇದ್ದರು.