

ಹಾನಗಲ್ಲ: ಅಶಾಶ್ವತ ನಂಬಿ ಕೆಡದಿರಿ, ದೇಹವೇ ದೇವರ ನಿವಾಸ ಸ್ಥಾನ, ಕಾವಿ ಧರಿಸಿದವರೆಲ್ಲ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳಾಗಲು ಸಾಧ್ಯವಿಲ್ಲ, ಸತ್ಕಾರ್ಯಗಳ ಮೂಲಕ ಸಮಾಜಕ್ಕೆ ಒಳಿತು ಮಾಡಿ ಬದುಕು ಸಾರ್ಥಕಗೊಳಿಸಿಕೊಳ್ಳಿ ಎಂದು ಶಿವಮೊಗ್ಗ ಬೆಕ್ಕಿನ ಕಲ್ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಕರೆ ನೀಡಿದರು.
ಬುಧವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಲಿಂ. ಕುಮಾರ ಶಿವಯೋಗಿಗಳ 95ನೇ ಪುಣ್ಯ ಸ್ಮರಣೋತ್ಸವದ ಧರ್ಮ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
12ನೇ ಶತಮಾನದ ಶರಣರ ಚಿಂತನೆಗಳು ಎಲ್ಲ ಕಾಲಕ್ಕೂ ಸಲ್ಲುವ ಅಮೃತ ನುಡಿಗಳು. ನಮ್ಮ ಬದುಕನ್ನು ಸಮಚಿತ್ತದಲ್ಲಿ ಕೊಂಡೊಯ್ಯುವ ಅಮೃತ ಗಂಗೆ. ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು ಅವತಾರ ಪುರುಷರು. ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಸತ್ಯದ ನೆಲೆಯಲ್ಲಿ ಸಮಾಜಕ್ಕೆ ಮುಟ್ಟಿಸಿದ್ದು ಮಾತ್ರವಲ್ಲ, ಅದರಂತೆ ನುಡಿದು ನಡೆದು ಸಮಾಜ ಸಮಾಜ ಎಂದೇ ಬದುಕನ್ನು ಶ್ರೀಗಂಧದಂತೆ ಸವೆಸಿದರು. ಅಂತರಂಗ ಶುದ್ಧತೆಯೇ ನಿಜವಾದ ಮಡಿ. ಬಹಿರಂಗದ ತೋರಿಕೆಗೆ ಮನಸು ಮಾಡಬೇಡಿ. ಮನುಷ್ಯ ಸ್ವಾರ್ಥಿಯಾಗುತ್ತಿರುವುದೇ ಎಲ್ಲ ಸಮಸ್ಯೆಗಳ ಮೂಲವಾಗಿದೆ. ಈಗಲಾದರೂ ಭಕ್ತಿಗೆ ಪ್ರಾಧಾನ್ಯತೆ ನೀಡಿರಿ. ಕಾವಿ ಧರಿಸಿದ ಮಾತ್ರಕ್ಕೆ ಸ್ವಾಮಿಯಾಗಲು ಸಾಧ್ಯವಿಲ್ಲ. ಸ್ವಾಮಿತ್ವದ ಶಕ್ತಿ ಸಮತೆಯನ್ನು ಅರಿತು ಅದರಂತೆ ಬಾಳಬೇಕು. ಮಠ ಮಾನ್ಯಗಳನ್ನು ರಕ್ಷಿಸುವ ಹೊಣೆ ಈ ಸಮಾಜದ್ದೇ ಆಗಿದೆ. ಅದಕ್ಕಾಗಿ ಗಂಭೀರವಾಗಿ ಆಲೋಚಿಸಿ. ಈ ಶರೀರ ಅಶಾಶ್ವತವಾದುದು. ಜೀವನ ಇರುವಾಗಲೇ ಸಾರ್ಥಕಗೊಳಿಸಿಕೊಳ್ಳಿ. ಮನುಷ್ಯನ ದೇಹವೇ ದೇಗುಲ ಎಂದರಿತರೆ ಬದುಕು ಅನ್ಯ ದೇವರನ್ನು ಬೆನ್ನಟ್ಟುವ ಅಗತ್ಯವೇ ಬರದು ಎಂದರು.
ರಾಯನಾಳದ ಅಭಿನವ ರೇವಣಸಿದ್ಧೇಶ್ವರ ಮಹಾಸ್ವಾಮಿಗಳು ಸಮ್ಮುಖವಹಿಸಿ ಮಾತನಾಡಿ, ಭಾರತ ದೈವಭೂಮಿ. ಇದು ಶಿವಯೋಗಿಗಳವರ ತಪಸ್ಸಿನಿಂದ ಸಾಧ್ಯವಾಗಿರುವಂತಹದ್ದು. ಇಲ್ಲಿನ ಗುರುಪರಂಪರೆ ಜಗತ್ತಿನಲ್ಲೇ ಶ್ರೇಷ್ಠವಾದುದು. ಇಲ್ಲಿ ಸಾಹಿತ್ಯ, ಜ್ಞಾನ, ಸಂಸ್ಕೃತಿ, ಧರ್ಮ ಬಿತ್ತಿ ಬೆಳೆಯಲಾಗಿದೆ. ಸ್ವಾಮಿಯ ಕಾರ್ಯವೂ ನಿಜವಾಗಿಯೂ ಇದೇ ಆಗಿದೆ. ಸಮಾಜ ಕಟ್ಟುವ ಕೆಲಸ ನಮ್ಮಿಂದಾಗಬೇಕು. ಗುರುವನ್ನು ಅರಿತರೆ ನಮ್ಮ ಅರಿವಿಗೆ ಬರುತ್ತಾನೆ. ಗುರುವನ್ನು ಅಳೆಯುವುದಲ್ಲ ಅರಿತು ನಡೆಯವುದೇ ನಿಜವಾದ ಕರ್ತವ್ಯ. ಎಲ್ಲ ಕಾಲಕ್ಕೂ ಸಲ್ಲುವ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ ಜೀವನ ಸಿದ್ಧಾಂತಗಳು ನಮ್ಮ ಬದುಕಿನ ಭಾಗಗಳಾಗಬೇಕು ಎಂದರು.
ನರಗುಂದ ಪತ್ರಿವನ ಮಠದ ಸಿದ್ಧವೀರ ಶಿವಾಚಾರ್ಯರು ಮಾತನಾಡಿದರು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಬಿಜಕಲ್ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು, ಗುತ್ತಲದ ಪ್ರಭುಮಹಾಸ್ವಾಮಿಗಳು, ಅಳಂದದ ವೃಷಭೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾಲೂಕಿನ ನಿವೃತ್ತ ಉಪನ್ಯಾಸಕರು, ಶಿಕ್ಷಕರನ್ನು ಶ್ರೀಮಠದಿಂದ ಗೌರವಿಸಲಾಯಿತು. ಸತೀಶ ಭಜಂತ್ರಿ ಅವರ ಶಹನಾಯಿ ವಾದನ ಗಮನ ಸೆಳೆಯಿತು. ಅಮೃತಾ ಸಿದ್ದಲಿಂಗಣ್ಣವರ ಹಾಗೂ ಪ್ರಿಯಾಂಕ ಭರತನಾಟ್ಯ ಪ್ರದರ್ಶಿಸಿದರು. ಅನನ್ಯ ಹೆಬ್ಬಾರ ಶಿವಸ್ತುತಿ ಪಠಿಸಿದರು. ಪ್ರಿಯಾಂಕ ವಚನ ನೃತ್ಯ ಮಾಡಿದರು. ಗೋಪಾಲ ಹುನಗನಹಳ್ಳಿ ಸ್ವಾಗತಿಸಿದರು. ಶಿವಮೂರ್ತಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.