

ಮುಂಡರಗಿ: ಭವಿಷ್ಯದಲ್ಲಿ ನೆಮ್ಮದಿಯ ಬದುಕು ಕಂಡಕೊಳ್ಳಬೇಕಾದರೆ ಈಗಿನ ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಳ್ಳಬೇಕು. ಉನ್ನತ ಗುರಿ, ವ್ಯವಸ್ಥಿತ ಯೋಜನೆಗಳೊಂದಿಗೆ ಕಾರ್ಯಪ್ರವೃತ್ತರಾಗುವ ಮೂಲಕ ಯಶಸ್ಸು ಕಾಣಬೇಕು ಎಂದು ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವೀರಣ್ಣ ಮಡಿವಾಳರ ಹೇಳಿದರು.
ತಾಲೂಕಿನ ಹೆಸರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ ಬೆಂಗಳೂರು ಮತ್ತು ಸರ್ಕಾರಿ ಪ್ರೌಢಶಾಲೆ ಹೆಸರೂರು ಆಶ್ರಯದಲ್ಲಿ ಕಲಿ- ಕಲಿಸು ಯೋಜನೆಯಡಿ ಶನಿವಾರ ಹಮ್ಮಿಕೊಂಡಿದ್ದ ಕಲಾ ಶಿಕ್ಷಣದ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೌಢಾವಸ್ಥೆ ಮನಸು ತಕ್ಷಣ ಖುಷಿ ಕೊಡುವ ವಿಚಾರಗಳತ್ತ ಬಹುಬೇಗ ಆಕರ್ಷಿತಗೊಳ್ಳುತ್ತದೆ. ಅದರಿಂದ ಸಮಯ ವ್ಯರ್ಥವಾಗುತ್ತದೆ. ನಮ್ಮ ಭವಿಷ್ಯವನ್ನು ಅದರಿಂದ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲ. ಪುಸ್ತಕ ಓದು ನಿಮಗೆಂದೂ ಮೋಸ ಮಾಡುವುದಿಲ್ಲ. ನೀವು ನಾಳೆಯ ನೆಮ್ಮದಿಯ ಬದುಕನ್ನು ಎದುರು ನೋಡುವವರಾಗಿದ್ದರೆ ಇಂದೇ ಉತ್ತಮ ಪುಸ್ತಕ ಓದಲು ಪ್ರಾರಂಭಿಸಬೇಕು. ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಪರಿಸರದೊಡನೆ ಬದುಕುವುದನ್ನು ಕಲಿಯಬೇಕಾಗುತ್ತದೆ. ತಜ್ಞರು ಬರೆದ ಪುಸ್ತಕ ಓದಬೇಕು. ಪರಿಸರದ ಉಳಿವಿಗೆ ಪಶು, ಪಕ್ಷಿ ಕೀಟಗಳು ತಮ್ಮದೆ ಆದ ಮಹತ್ತರ ಕೊಡುಗೆ ನೀಡುತ್ತಿವೆ. ನಮಗರಿವಿಲ್ಲದೆ ಪರಿಸರದ ನಾಶದಲ್ಲಿ ತೊಡಗಿದ್ದೇವೆ. ಈಗಿನಿಂದಲೇ ನಾವು ಜಾಗೃತರಾಗಬೇಕು ಎಂದರು.
ಮುಖ್ಯಶಿಕ್ಷಕ ಮಲ್ಲಪ್ಪ ನಾಟಿಕರ ಅಧ್ಯಕ್ಷತೆ ವಹಿಸಿದ್ದರು. ಗೀತಾ ಹಿರೇಮಠ ಇದ್ದರು. ಶಿಕ್ಷಕರಾದ ರವಿ ದೇವರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಹೇಶ ಎಸ್.ಎಚ್. ವಂದಿಸಿದರು.