

ಮೈಸೂರು: ಹೆಚ್ಚು-ಹೆಚ್ಚು ಜನರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಮಾತ್ರ ದಸರಾ ಯಶಸ್ವಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದಸರಾ ಹಿನ್ನೆಲೆ ಮಹರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಖ್ಯಾತ ಸಾಹಿತಿ ಹಂ.ಪ ನಾಗರಾಜ್ ಅವರಿಂದ ದಸರಾ ಉದ್ಘಾಟನೆಗೊಂಡಿದೆ. ಇಂದಿನಿಂದ ನವರಾತ್ರಿ ಹಾಗೂ 10ನೇ ದಿನ ವಿಜಯದಶಮಿ ಕಾರ್ಯಕ್ರಮ ನೆರವೇರಲಿದೆ. ಜನರ ದಸರಾ ಮಾಡುವ ಉದ್ದೇಶದಿಂದ ಈ ಬಾರಿ ಅದ್ದೂರಿಯಾಗಿ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದರು ಹೇಳಿದರು.
ನಾಡ ಹಬ್ಬ ಶಿಷ್ಟರ ರಕ್ಷಣೆ ದುಷ್ಟರ ಸಂಹಾರ ಮಾಡುವ ಹಬ್ಬವಾಗಿದೆ. ರಾಜ-ಮಹಾರಾಜರ ಕಾಲದಲ್ಲಿ ವಿಜಯೋತ್ಸವವಾಗಿ ಆಚರಿಸಲಾಗುತ್ತಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಸರಾ ಹಬ್ಬವಾಗಿ ಜನರ ಹಬ್ಬವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ದೇಶದಲ್ಲಿನ ಎಲ್ಲಾ ಆಹಾರ ಪದಾರ್ಥಗಳು ದಸರಾ ಆಹಾರ ಮೇಳದಲ್ಲಿ 108 ಮಳಿಗೆಗಳ ಮೂಲಕ ಲಭ್ಯವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿವಿಧ ಬಗೆಯೆ ಖಾದ್ಯಗಳನ್ನು ಸವಿಯಬೇಕು ಎಂದರು. ಕರ್ನಾಟಕ ದಾಸೋಹದಲ್ಲಿ ದೇಶದಲ್ಲಿ ಮೊದಲಿದೆ. 4.15 ಕೋಟಿ ಜನರಿಗೆ ಪಡಿತರ ವಿತರಿಸಲಾಗುತ್ತಿದೆ. ಚುನಾವಣಾ ಪೂರ್ವ ಭರವಸೆಯಂತೆ ಪ್ರತಿಯೊಬ್ಬ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡಲು ನಿರ್ಧರಿಸಲಾಗಿತ್ತು. ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡದ ಕಾರಣ 5 ಅಕ್ಕಿ ಹಾಗೂ 5 ಅಕ್ಕಿ ಬದಲಿಗೆ ಕಾರ್ಡ್ ಮಾಲೀಕರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ವಿಧಾನಪರಿಷತ್ ಸದಸ್ಯ ಡಿ. ತಿಮ್ಮಯ್ಯ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕ ಎ.ಆರ್.ಕೃಷ್ಣಮೂರ್ತಿ, ಡಿ.ರವಿಶಂಕರ್, ಎಂಎಲ್ಸಿ ಮಂಜೇಗೌಡ, ಆಹಾರ ಮೇಳ ಉಪಸಮಿತಿ ನಿರ್ದೇಶಕ ರಘುನಂದನ್, ಆಹಾರ ಸಮಿತಿ ಜಂಟಿ ನಿರ್ದೇಶಕರಾದ ಕುಮುದಾ, ಜಿಲ್ಲಾ ಅಂಕಿತಾಧಿಕಾರಿ ಕಾಂತರಾಜು, ಪ್ರತೀಕ್ ಇತರರು ಇದ್ದರು.
2 ಗಂಟೆ ತಡವಾಗಿ ಕಾರ್ಯಕ್ರಮ ಆರಂಭ: ಬೆಳಗ್ಗೆ 11.30ಕ್ಕೆ ಆಹಾರ ಮೇಳ ಉದ್ಘಾಟನೆ ಕಾರ್ಯಕ್ರಮ ನಿಶ್ಚಯವಾಗಿತ್ತು. ಆದರೆ, ಕಾರ್ಯಕ್ರಮ ಮಧ್ಯಾಹ್ನ 1.45ಕ್ಕೆ ಆರಂಭವಾಗಿ ಕೇವಲ 15 ನಿಮಿಷದಲ್ಲಿ ಮುಗಿಯಿತು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ 1.15ಕ್ಕೆ ಕಾರ್ಯಕ್ರಮ ಸ್ಥಳಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗಾಗಿ ಕಾದು ಕುಳಿತರು. ಸಿಎಂ 1.45ಕ್ಕೆ ಕಾರ್ಯಕ್ರಮಕ್ಕೆ ಬಂದು ಉದ್ಘಾಟಿಸಿ ತೆರಳಿದರು. ನಂತರ ಸಚಿವ ಮುನಿಯಪ್ಪ ಕಾರ್ಯಕ್ರಮ ಕುರಿತು ಒಂದೆರಡು ನಿಮಿಷ ಮಾತನಾಡಿ ಹೊರಟರು. ಅಲ್ಲಿಗೆ ಕೇವಲ 15 ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯಗೊಂಡಿತು. ಅಧಿಕಾರಿಗಳು ಸಾರ್ವಜನಿಕರು ಬೆಳಗ್ಗೆಯಿಂದ ಕಾದು ಕೂರಬೇಕಾದ ಪರಿಸ್ಥತಿ ನಿರ್ಮಾಣವಾಯಿತು.