ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ

12KMD-1
ಹನುಮಂತನಗರದ ಭಾರತೀ ವಸತಿ ಶಾಲೆಯ ವತಿಯಿಂದ ಅಣ್ಣೂರು ಸಿದ್ದೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಸಾವಯವ ಕೃಷಿ ಸಂತೆಯಲ್ಲಿ ಭಾರತೀ ವಿದ್ಯಾ ಸಂಸ್ಥೆಯ ಚೇರ‌್ಮನ್, ಎಂಎಲ್ಸಿ ಮಧು ಜಿ ಮಾದೇಗೌಡ ತರಕಾರಿ ಖರೀದಿಸಿದರು. ಕೆ.ಎಸ್. ಗೌಡ, ಪಿ. ವೃಷಭೇಂದ್ರ, ಎಂ. ಬಸವರಾಜು ಇತರರು ಇದ್ದರು.
Published on

ಕೆ.ಎಂ.ದೊಡ್ಡಿ: ಮಕ್ಕಳನ್ನು ಈ ದೇಶದ ಸತ್ಪ್ರಜೆಯಾಗಿ ರೂಪಿಸುವುದು ನಮ್ಮ ಹೊಣೆ ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾಸಂಸ್ಥೆಯ ಚೇರ‌್ಮನ್ ಮಧು ಜಿ. ಮಾದೇಗೌಡ ತಿಳಿಸಿದರು.

ಸಮೀಪದ ಹನುಮಂತನಗರದ ಭಾರತೀ ವಸತಿ ಶಾಲೆ ವತಿಯಿಂದ ಅಣ್ಣೂರು ಸಿದ್ದೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಾಲಕರ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಸನ್ಮಾರ್ಗಗಳನ್ನು ಕಲಿಸಲು ಪಾಲಕರು ಶ್ರಮ ವಹಿಸಬೇಕು ಎಂದರು.

ನಗರ ಪ್ರದೇಶದಲ್ಲಿ ಸಿಗುವ ಸೌಲಭ್ಯಗಳು ನಮ್ಮ ಗ್ರಾಮೀಣ ಶಾಲೆಯಲ್ಲೂ ಸಿಗುತ್ತಿದೆ. ಕಳೆದ ವರ್ಷಕ್ಕಿಂತ ಹಲವು ಬದಲಾವಣೆಗಳನ್ನು ಮಾಡಿದ್ದು, ಮುಂದಿನ ವರ್ಷಕ್ಕೂ ಹೆಚ್ಚಿನ ಬದಲಾವಣೆಗಳನ್ನು ಕಾಣಬಹುದು. ಹೊಸ ಆವಿಷ್ಕಾರಗಳತ್ತ ಶಾಲೆಯನ್ನು ಮತ್ತಷ್ಟು ಪ್ರಬಲಗೊಳಿಸಲಾಗುವುದು ಎಂದು ಹೇಳಿದರು.

ನನ್ನ ತಂದೆ ಮಾಜಿ ಸಂಸದ ಜಿ.ಮಾದೇಗೌಡ ಅವರು ಹಳ್ಳಿಗಾಡಿನ ಮಕ್ಕಳ ಭವಿಷ್ಯಕ್ಕಾಗಿ ಸ್ಥಾಪಿಸಿದ ಭಾರತೀ ಶಿಕ್ಷಣ ಸಂಸ್ಥೆ ಶರವೇಗದಲ್ಲಿ ಬೆಳೆದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.

ಭಾರತೀ ಎಜುಕೇಷನ್ ಟ್ರಸ್ಟ್‌ನ ಹನುಂತನಗರ ಕ್ಯಾಂಪಸ್ ಕಾರ್ಯದರ್ಶಿ ಗುರುದೇವರಹಳ್ಳಿ ಸಿದ್ದೇಗೌಡ ಮಾತನಾಡಿ, ಪಾಲಕರು ತಮ್ಮ ಎಲ್ಲ ಒತ್ತಡಗಳನ್ನು ಬದಿಗಿಟ್ಟು ಕ್ರೀಡಾಕೂಟದಲ್ಲಿ ತಮ್ಮನ್ನು ತೋಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮಕ್ಕಳು ಚಪ್ಪಾಳೆ ಹಾಕುತ್ತ ತಮ್ಮ ತಂದೆ-ತಾಯಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಖುಷಿ ಪಡುತ್ತಿದ್ದು ಸಾರ್ಥಕವಾಯಿತು ಎಂದರು.

ಭಾರತೀ ವಸತಿ ಶಾಲೆಯ ಪ್ರಾಂಶುಪಾಲ ಪುಟ್ಟಸ್ವಾಮಿ ಮಾತನಾಡಿ, ಪಾಲಕರಿಗಾಗಿ ಆಯೋಜಿಸಿರುವ ಕ್ರೀಡಾಕೂಟ ಪಾಲಕರು, ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಒಡನಾಟವನ್ನು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟರು.

ಪಾಲಕರಿಗಾಗಿ ಕ್ರೀಡೆಗಳು: ಪಾಲಕರಿಗಾಗಿ ಬಲೂನು ಒಡೆಯುವ ಆಟ, ಮ್ಯೂಸಿಕಲ್ ಚೇರ್, ಗುಂಡು ಎಸೆತ, ಬಕೆಟ್ ಇನ್ ದ ಬಾಲ್, ಚಮಚ ನಿಂಬೆ ಹಣ್ಣಿನ ಓಟ, ಕಾಂಗರೋ ರೇಸ್ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದವರಿಗೆ ಬಹುಮಾನ ನೀಡಲಾಯಿತು.

ವಿದ್ಯಾರ್ಥಿಸಂತೆಗೆ ಉತ್ತಮ ಪ್ರತಿಕ್ರಿಯೆ: ಪಾಲಕರ ಕ್ರೀಡಾಕೂಟದ ಪ್ರಯುಕ್ತ ಭಾರತೀ ವಸತಿ ಶಾಲೆಯ ಅಣ್ಣೂರು ಸಿದ್ದೇಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸಾವಯವ ಕೃಷಿ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಿದ್ಯಾರ್ಥಿ ಸಂತೆಯಲ್ಲಿ ಗ್ರಾಹಕರು, ಪಾಲಕರು ಮತ್ತು ಭಾರತೀ ವಿದ್ಯಾಸಂಸ್ಥೆಯ ಚೇರ‌್ಮನ್ ಮಧು ಜಿ. ಮಾದೇಗೌಡ ವಿದ್ಯಾರ್ಥಿಗಳಿಂದ ಮೆಂತ್ಯ, ಕಿರ್ಕಿರೆ, ಕೊತ್ತಂಬರಿ ಸೊಪ್ಪುಗಳನ್ನು ನೇರವಾಗಿ ಖರೀದಿಸಿದರು.

ಆತ್ಮಲಿಂಗೇಶ್ವರಿ ಧರ್ಮದರ್ಶಿ ಮಂಡಳಿ ಸದಸ್ಯ ಕೆ.ಎಸ್. ಗೌಡ, ಉಪನ್ಯಾಸಕರಾದ. ಪಿ. ವೃಷಭೇಂದ್ರ, ಎಂ. ಬಸವರಾಜು, ಶಿವಲಿಂಗೇಗೌಡ, ಬಿ.ಕೆ.ಯೋಗೇಂದ್ರ, ಎಚ್.ಎಂ.ಅರುಣ್, ಪಿ.ಜೆ. ದಿವ್ಯದರ್ಶಿನಿ, ಎನ್.ಎಂ. ಶ್ರುತಿ, ಎಸ್, ಶಾಲಿನಿ ಸಿದ್ದರಾಜು, ಜೆ. ಪುಷ್ಪಲತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರದೀಪ್, ಓದುಗೌಡ, ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net