

ಮದ್ದೂರು: ರಂಗಕಲೆಗಳು, ಜಾನಪದ ಪ್ರಕಾರಗಳು ನಮ್ಮ ಸಂಸ್ಕೃತಿಕ ಪ್ರತೀಕವಾಗಿದ್ದು, ಇವುಗಳನ್ನು ಉಳಿಸಲು ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು ಎಂದು ಆಬಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರ್.ಸುರೇಶ್ ತಿಳಿಸಿದರು.
ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಯುವಕರ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಬಾಳಿನ ದಾರಿ ಅಥವಾ ಸಂಸಾರ ನೌಕೆ ಎಂಬ ಸಾಮಾಜಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗಕಲೆಯು ಪ್ರೇಕ್ಷಕರ ಸಮ್ಮುಖದಲ್ಲಿ ಸಂಗೀತ, ಸಂಭಾಷಣೆ, ಸಂಜ್ಞೆ, ನೃತ್ಯ ಹಾಗೂ ದೃಶ್ಯಗಳನ್ನು ಉಪಯೋಗಿಸಿಕೊಂಡು ಅಭಿನಯಿಸಿ ಜನರನ್ನು ಮನರಂಜಿಸುವ ಕಲೆಯಾಗಿದ್ದು, ಇಂತಹ ಕಲೆಗಳು ನಮ್ಮ ಮಣ್ಣಿನ ಸೊಗಡು ತೋರಿಸುವುದಲ್ಲದೆ. ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂಬ ಸಂದೇಶ ನೀಡುತ್ತದೆ ಎಂದರು.
ಇಂದಿನ ಯುವ ಜನಾಂಗ ರಂಗಕಲೆಗಳು, ಜಾನಪದ ಪ್ರಕಾರಗಳನ್ನು ಬಿಟ್ಟು, ಪಾಶ್ಚಿಮಾತ್ಯ ಸಂಸ್ಕೃತಿಗೆ, ಮೊಬೈಲ್, ಕಂಪ್ಯೂಟರ್, ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಕಲಾವಿದರು ನಡೆಸಿಕೊಟ್ಟ ಸಾಮಾಜಿಕ ನಾಟಕ ನೋಡುಗರನ್ನು ರಂಜಿಸಿತು. ಕಲಾವಿದರು ಉತ್ತಮವಾಗಿ ನಟನೆ ಮಾಡಿದಾಗ ಗ್ರಾಮಸ್ಥರು ಶಿಳ್ಳೆ, ಚಪ್ಪಾಳೆ ಹಾಗೂ ಹೂವಿನ ಹಾರ ಹಾಕಿ ಪ್ರೋತ್ಸಾಹಿಸಿದರು.
ಮುಖಂಡರಾದ ರಾಮಕೃಷ್ಣ, ಬಿಳಿಗೌಡ, ಸತೀಶ್, ದೊಡ್ಡತಿಮ್ಮಯ್ಯ, ವೀರಣ್ಣ, ಭೀಮೇಶ್, ಕಿರಣ್, ಗುರು, ಚೇತನ್ ಸೇರಿದಂತೆ ಇತರರು ಇದ್ದರು.