

ಹನೂರು: ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಸರತಿ ಸಾಲಿನ ಸಂಕೀರ್ಣ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಸೂಚಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಪ್ರಗತಿಯಲ್ಲಿರುವ ಸರತಿ ಸಾಲಿನ ಸಂಕೀರ್ಣ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು.
ಇತ್ತೀಚಿನ ದಿನಗಳಲ್ಲಿ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದೆ. ದೀಪಾವಳಿ, ಯುಗಾದಿ, ಮಹಾ ಶಿವರಾತ್ರಿ, ಮಹಾಲಯ ಅಮಾವಾಸ್ಯೆ ಜಾತ್ರೆ ಹಾಗೂ ಇನ್ನಿತರೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ಭಕ್ತರು ದೇವರ ದರ್ಶನ ಪಡೆಯಬೇಕಾದರೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ತೆರಳಬೇಕಿದೆ. ಇದರಿಂದ ಭಕ್ತರು ಅದರಲ್ಲೂ ಮಹಿಳೆಯರು, ಮಧುಮೇಹಿಗಳು ಹಾಗೂ ಇನ್ನಿತರೆ ಅನಾರೋಗ್ಯಕ್ಕೆ ಒಳಗಾದವರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ 45 ಕೋಟಿ ರೂ. ವೆಚ್ಚದಲ್ಲಿ ಕ್ಯೂ ಲೈನ್ ಕಾಮಗಾರಿಯನ್ನು ಕೈಗೊಂಡಿರುವುದು ಉತ್ತಮ ಬೆಳವಣಿಗೆ. ಕಾಮಗಾರಿಯ ಜವಬ್ದಾರಿ ಹೊತ್ತವರು ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಶೀಘ್ರ ಪೂರ್ಣಗೊಳಿಸಿ ಭಕ್ತರ ಸೇವೆಗೆ ಸಮರ್ಪಿಸಬೇಕು. ಇನ್ನು ಕಾಮಗಾರಿಯ ವೇಳೆ ಭಕ್ತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಬಸ್ ನಿಲ್ದಾಣದ ಬಳಿ ನಿರ್ಮಿಸುತ್ತಿರುವ ಸಾರ್ವಜನಿಕ ಶೌಚಗೃಹಕ್ಕೆ ತೆರಳಿದ ಶಾಸಕರು ಪರಿಶೀಲನೆ ನಡೆಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು. ಅಂತರಗಂಗೆಯ ಕಲ್ಯಾಣಿಗೆ ತೆರಳಿ ಸ್ವಚ್ಛತೆ ಕಾಪಾಡುವಂತೆ ಪೌರ ಕಾರ್ಮಿಕರಿಗೆ ತಿಳಿಸಿದರು. ಇನ್ನು ಶ್ರೀ ಮಹದೇಶ್ವರರ ಪ್ರತಿಮೆಯ ತಳ ಭಾಗದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ತಡೆಗೋಡೆ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ತೆರಳಿ ಮಳೆಗಾಲದ ವೇಳೆ ಗುಡ್ಡ ಕುಸಿತವಾಗದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಜಿ.ಎಲ್ ಚಂದ್ರಶೇಖರ್, ಪಿಡಬ್ಲೂೃಡಿ ಎಇಇ ಚಿನ್ನಣ್ಣ, ಎಇ ಸಂತೋಷ್‌ಕುಮಾರ್, ಪ್ರಾಧಿಕಾರದ ಇಂಜಿನಿಯರ್ ಸೆಲ್ವ ಗಣಪತಿ ಇತರರು ಇದ್ದರು.