

ಯಳಂದೂರು: ದೀಪಾವಳಿ ಹಬ್ಬಕ್ಕೆ ಸುಡುಮದ್ದುಗಳನ್ನು ಸಿಡಿಸುವ ಬದಲು ಮಣ್ಣಿನ ಹಣತೆಗಳನ್ನು ಹಚ್ಚುವ ಮಾಡುವ ಮೂಲಕ ಪರಿಸರ ನೈರ್ಮಲ್ಯ ಕಾಪಾಡಿ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಡಿವೈಪಿಸಿ ನಾಗೇಂದ್ರ ಸಲಹೆ ನೀಡಿದರು.
ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಮಣ್ಣಿನ ಹಣತೆ ವಿತರಣೆ ಮತ್ತು ಹೆಣ್ಣು ಮಕ್ಕಳಿಗೆ ಹೈಜೆನಿಕ್ ಕಿಟ್‌ಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಇಂದು ಜಾಗತಿಕ ತಾಪಮಾನ ಹೆಚ್ಚಳವಾಗಿದೆ. ಇಡೀ ಜಗತ್ತು ಇದರಿಂದ ಸಾಕಷ್ಟು ಕೆಟ್ಟ ಪರಿಣಾಮಗಳನ್ನು ಎದುರಿಸುತ್ತಿದೆ. ಮುಂದೊಂದು ದಿನ ಇಡೀ ಜೀವಕುಲಕ್ಕೆ ಇದು ಮಾರಕವಾಗಿ ಪರಿಣಮಿಸುವ ಅಪಾಯವಿದೆ. ಹಾಗಾಗಿ ನಾವು ಇಂದು ಎಚ್ಚೆತ್ತುಕೊಳ್ಳಬೇಕಿದೆ. ಸುಡುಮದ್ದುಗಳಿಂದ ಬರುವ ಹೊಗೆ ಪರಿಸರಕ್ಕೆ ಮಾರಕವಾಗಲಿದೆ. ಹಾಗಾಗಿ, ನಮ್ಮ ಸಂಪ್ರದಾಯದಂತೆ ಮಣ್ಣಿನ ಹಣತೆಗಳನ್ನು ಹಚ್ಚುವ ಮೂಲಕ ನಾವು ಪರಿಸರಕ್ಕೆ ಪೂಕರವಾಗಿ ಅಳಿಲು ಸೇವೆ ಸಲ್ಲಿಸೋಣ ಎಂದರು.
ಮುಖ್ಯಶಿಕ್ಷಕ ಎಂ.ವೀರಭದ್ರಸ್ವಾಮಿ ಮಾತನಾಡಿ, ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ವತಿಯಿಂದ ನಮ್ಮ ಶಾಲೆಯ 21 ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಸೋಪು, ಹ್ಯಾಂಡ್‌ವಾಷ್, ಬಾಚಣಿಗೆ, ಸ್ಯಾನಿಟರಿ ಪ್ಯಾಡ್, ಸ್ಯಾನಿಟೈಸರ್, ನೈಲ್ ಕಟರ್ ಸೇರಿದಂತೆ ಅನೇಕ ವಸ್ತುಗಳಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿನಿಯರಿಗೆ ಇದನ್ನು ವಿತರಣೆ ಮಾಡಲಾಗುತ್ತಿದ್ದು, ದೈಹಿಕ ಆರೋಗ್ಯ ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಹಾಯಕವಾಗಲಿದೆ. ವಿದ್ಯಾರ್ಥಿನಿಯರು ಮಾನಸಿಕವಾಗಿ ಪರೀಕ್ಷೆಗೆ ಸಿದ್ಧಗೊಳ್ಳಲು ಇದು ಅನುಕೂಲವಾಗಲಿದೆ. ಇದರೊಂದಿಗೆ ಎಲ್ಲರಿಗೂ ಗ್ರೀಟಿಂಗ್ ಕಾರ್ಡ್ ಹಾಗೂ ಮಣ್ಣಿನ ಹಣತೆಯನ್ನು ವಿತರಿಸಿ ಗ್ರಾಮೀಣ ಭಾಗದ ಮಕ್ಕಳಲ್ಲಿ ನವ ಚೈತನ್ಯ ತುಂಬಲು ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಬಿಆರ್‌ಸಿ ರಂಗಸ್ವಾಮಿ, ಸಿಆರ್‌ಪಿ ರೇಚಣ್ಣ, ಶಿಕ್ಷಣ ಫೌಂಡೇಷನ್‌ನ ಜಿಲ್ಲಾ ಸಂಯೋಜಕ ನಾಗರಾಜು, ವಲಯ ಸಂಯೋಜಕ ಅರುಣ್‌ಕಾಂತ್, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.