

ಮಾಗಡಿ : ಗುತ್ತಿಗೆದಾರರು ಗುಣಮಟ್ಟದ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಿಸುವಂತೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್ ಗುತ್ತಿಗೆದಾರರಿಗೆ ಸೂಚಿಸಿದರು.
ತಾಲೂಕಿನ ಚಕ್ರಭಾವಿ, ಸೀಗೆಕುಪ್ಪೆ, ಕಲ್ಲುದೇವನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದಿಂದ ಸುಮಾರು 1,30 ಕೋಟಿ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಮರು ದಿನವೇ ಕೆಲಸ ಪ್ರಾರಂಭಿಸಿ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸಬೇಕು, ಕಾಮಗಾರಿ ಕಳಪೆಯಿಂದ ಕೂಡಿರುವ ಬಗ್ಗೆ ದೂರುಬಂದರೆ ಮುಲಾಜಿಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸುವ ಕೆಲಸ ಮಾಡಲಾಗುವುದು. ಕಾಮಗಾರಿ ನಡೆಯುವ ವೇಳೆ ಸ್ಥಳಿಯ ಚುನಾಯಿತ ಮುಖಂಡರು ಹೆಚ್ಚು ಗಮನ ಹರಿಸಿ ಗುಣಮಟ್ಟ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಕಾಮಗಾರಿಗೆ ವೇಗ ನೀಡಲು ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಸಭೆ ಕರೆದು ಸೂಚಿಸಿದ್ದಾರೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸಮರ್ಪಕ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.
ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಚಕ್ರಭಾವಿ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಿಸಲು ಮಂಜೂರಾಗಿದೆ. ಆಸ್ಪತ್ರೆಯಲ್ಲಿ ಹಾಲು ಉಣಿಸುವ ಕೊಠಡಿಗಳ ವಿನ್ಯಾಸದಲ್ಲಿ ಮರು ವಿನ್ಯಾಸ ಪುನರ್ ಅನುಮೋದನೆ ಹಂತದಲ್ಲಿದೆ. 15 ದಿನದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಆಸ್ಪತ್ರೆಯ ಕಾಮಗಾರಿಗೆ ಶಾಸಕರು ಚಾಲನೆ ನೀಡಲಿದ್ದಾರೆ ಎಂದರು.
ಚಕ್ರಭಾವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶತಮಾನದ ಶಾಲೆಯಾಗಿದೆ. ಈ ಸಂಬಂಧ ಶಾಲೆ ಉಳಿಸುವ ನಿಟ್ಟಿನಲ್ಲಿ 10 ಕೋಟಿರೂ ವೆಚ್ಚದಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಸುವ ಜಾಗ ಲಭ್ಯತೆ ಇದ್ದು, ಮೈದಾನ ಅಭಿವೃದ್ಧಿ ಜತೆಗೆ ಸಿಎಸ್‌ಆರ್ ಅನುದಾನದಡಿ 2 ಕೋಠಡಿಗಳನ್ನು ನಿರ್ಮಿಸಲು ಶಾಸಕರು ಸೂಕ್ತ ಕ್ರಮ ಕೈ ಗೊಂಡಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಶಶಿಕಲಾ ಸ್ವಾಮಿ, ಮಾಜಿ ಅಧ್ಯಕ್ಷೆ ಮಂಜುಳಾ ದೀಪಕ್, ಮುಖಂಡರಾದ ಜೆಪಿ.ಚಂದ್ರೇಗೌಡ, ಸಿಎಂ. ಮಾರೇಗೌಡ, ತಾಪಂ ಮಾಜಿ ಅಧ್ಯಕ್ಷ ಕಾಂತರಾಜು, ಶಿವಣ್ಣ, ರತ್ನಮ್ಮ ಶ್ರೀನಿವಾಸ್, ಸದಸ್ಯರಾದ ಹನುಮೇಗೌಡ, ಚನ್ನಯ್ಯ, ಚಕ್ರಭಾವಿ ಸೋಮಶೇಖರ್, ಬೆಳಗವಾಡಿ ರಂಗನಾಥ್, ಬೈರೇಶ್, ಶ್ರೀಧರ್, ಕಾಂಗ್ರೆಸ್ ಮುಖಂಡ ದೀಪಕ್, ಇಇ ಶ್ರೀನಿವಾಸ್ , ಗುತ್ತಿಗೆದಾರ ಜಗದೀಶ್ ಇತರರು ಇದ್ದರು.