ಜೀವಿತದ ಕೊನೆವರೆಗೂ ಆರೋಗ್ಯ ಕಾಪಾಡಿಕೊಳ್ಳಿ

ಚಿಕ್ಕಬಳ್ಳಾಪುರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಚಾಲನೆ ನೀಡಿದರು. ಶ್ರೀ ಸಾಯಿ ಇಂಟರ್‌ನ್ಯಾಷನಲ್ ಟ್ರಸ್ಟ್‌ನ ನಾರಾಯಣಮೂರ್ತಿ, ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳಾದ ಸುಬ್ಬರಾಯಪ್ಪ, ಶ್ರೀನಿವಾಸರೆಡ್ಡಿ, ಜಯರಾಮರೆಡ್ಡಿ, ಅಶ್ವತ್ಥನಾರಾಯಣ್ ಮತ್ತಿತರರು ಇದ್ದರು.
10 cbp 3
ಚಿಕ್ಕಬಳ್ಳಾಪುರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಚಾಲನೆ ನೀಡಿದರು. ಶ್ರೀ ಸಾಯಿ ಇಂಟರ್‌ನ್ಯಾಷನಲ್ ಟ್ರಸ್ಟ್‌ನ ನಾರಾಯಣಮೂರ್ತಿ, ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳಾದ ಸುಬ್ಬರಾಯಪ್ಪ, ಶ್ರೀನಿವಾಸರೆಡ್ಡಿ, ಜಯರಾಮರೆಡ್ಡಿ, ಅಶ್ವತ್ಥನಾರಾಯಣ್ ಮತ್ತಿತರರು ಇದ್ದರು.
Published on

ಹಿರಿಯ ನಾಗರಿಕರಿಗೆ ಡಿಸಿ ರವೀಂದ್ರನ್ ಸಲಹೆ ದೇಹಕ್ಕೆ ವಯಸ್ಸಾಗುವುದು ಪ್ರಕೃತಿ ಸಹಜ ಕ್ರಿಯೆ



ಚಿಕ್ಕಬಳ್ಳಾಪುರ: ಪ್ರತಿಯೊಬ್ಬರ ಜೀವಿತದ ಕೊನೆಯ ಗಳಿಗೆಯವರೆಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸಲಹೆ ನೀಡಿದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ದೇಹಕ್ಕೆ ವಯಸ್ಸಾಗುವುದು ಪ್ರಕೃತಿ ಸಹಜ ಕ್ರಿಯೆ. ಗಟ್ಟಿ ಮನಸ್ಸು ಮಾಡಿದರೆ ಜೀವಿತದ ಕೊನೆಗಳಿಗೆಯವರೆಗೂ ದೇಹವನ್ನು ಸದೃಢವಾಗಿಟ್ಟುಕೊಂಡು ಸಂತೋಷ ಅನುಭವಿಸಬಹುದು. ಒಂದು ನಿರ್ದಿಷ್ಟ ವಯಸ್ಸಿಗೆ ಇಲ್ಲವೇ ದೇಹವು ದುಡಿಯಲು ಅಸಮರ್ಥಕ್ಕೀಡಾದಾಗ ಉದ್ಯೋಗಕ್ಕೆ ವಿದಾಯ ಹೇಳಿ ನಿವೃತ್ತಿ ಪಡೆಯಲಾಗುತ್ತದೆ. ಕೆಲಸದ ವೇಳೆ ಸಮಾಜದ ಇತರರಿಗೆ ಅಗತ್ಯತೆ ಇರುತ್ತದೆ. ಜೀವನವೂ ಸುಗಮವಾಗಿರುತ್ತದೆ. ಆದರೆ, ನಿವೃತ್ತಿಯ ಸಂದರ್ಭದಲ್ಲಿ ಹಲವಾರು ಸವಾಲುಗಳು ಎದುರಾಗಿ ನಿಜವಾದ ಜೀವನ ಅನಾವರಣಗೊಳ್ಳುತ್ತದೆ. ನಿಧಾನವಾಗಿ ನಿರ್ಲಕ್ಷಕ್ಕೆ ಒಳಗಾಗಲಿದ್ದು ಇದೆಲ್ಲವನ್ನು ಸೂಕ್ಷ್ಮವಾಗಿ ಅರ್ಥೈಸಿ ಕೊಳ್ಳಬೇಕು. ಗಳಿಸಿದ ಆಸ್ತಿ, ಧನವನ್ನು ನಿವೃತ್ತಿಯ ಅವಧಿಯಲ್ಲಿ ಅಗತ್ಯಕ್ಕೆ ತಕ್ಕಂತೆ ನಿರ್ದಿಷ್ಟ ಪರಿಮಿತಿಯಲ್ಲಿ ಖರ್ಚು ಮಾಡಬೇಕು. ರಕ್ತಸಂಬಂಧಿಗಳು, ಮಕ್ಕಳು ಎಷ್ಟೇ ಹತ್ತಿರವಿದ್ದರೂ ಇನ್ನೊಬ್ಬರ ಹಿಡಿತಕ್ಕೆ ಸಿಲುಕಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟೇಶರೆಡ್ಡಿ, ಅಂಗವಿಕಲರ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್.ಎಂ. ಜಗದೀಶ, ಶ್ರೀ ಸಾಯಿ ಇಂಟರ್‌ನ್ಯಾಷನಲ್ ಟ್ರಸ್ಟ್‌ನ ನಾರಾಯಣಮೂರ್ತಿ, ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳಾದ ಸುಬ್ಬರಾಯಪ್ಪ, ಶ್ರೀನಿವಾಸರೆಡ್ಡಿ, ಜಯರಾಮರೆಡ್ಡಿ, ಅಶ್ವತ್ಥನಾರಾಯಣ್ ಮತ್ತಿತರರು ಇದ್ದರು.

ವೃದ್ಧರು ನಿರುಪಯುಕ್ತರಲ್ಲ
ಹಿರಿಯ ನಾಗರಿಕರು ಅನ್ಯಾಯಕ್ಕೊಳಗಾದಾಗ ಸಕ್ಷಮ ಪ್ರಾಧಿಕಾರಗಳನ್ನು ಸಂಪರ್ಕಿಸಬೇಕು. ಉಚಿತ ಸಹಾಯವಾಣಿಗೆ 1091 ಮತ್ತು 1090ಗೆ ಕರೆ ಮಾಡಿ ಸಮಸ್ಯೆಗಳನ್ನು ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು. ಹಿರಿಯರು ಕಿರಿಯರಿಗೆ ದಾರಿದೀಪವಾಗಬೇಕು. ಆಗ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ಕಾಣಲು ಸಾಧ್ಯ. ಎಂದಿಗೂ ವೃದ್ಧರು ನಿರುಪಯುಕ್ತರಲ್ಲ. ಸಮಾಜದ ಅಮೂಲ್ಯ ಆಸ್ತಿ. ಇದಕ್ಕೆ ವಿಶ್ವ ಹಿರಿಯ ನಾಗರಿಕರ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಿರಿಯರ ಬದುಕು ಹಸನುಗೊಳಿಸಿ
ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ಹೋಗುವ, ಇಲ್ಲವೇ ಸಂಗಾತಿಯ ಮಾತಿಗೆ ಕಟ್ಟುಬಿದ್ದು ಕುಟುಂಬ ತೊರೆದು ಹೋಗುವ ಪ್ರವೃತ್ತಿ, ವೃದ್ದರನ್ನು ಅನಾಥಾಶ್ರಮಗಳಿಗೆ ಸೇರಿಸುವಂತಹುದು ಹೆಚ್ಚುತ್ತಿದೆ. ಇದರಿಂದ ಬಾಧಿತರಾಗುವವರ ಗೋಳನ್ನು ವಿವರಿಸುವುದು ಕಷ್ಟಸಾಧ್ಯ. ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪಿ.ಎನ್. ರವೀಂದ್ರನ್ ಹೇಳಿದರು.ಬಹುತೇಕ ವೃದ್ದರೂ ಕೊನೆಗಾಲದಲ್ಲಿ ನೆಮ್ಮದಿಯಿಂದ ಇರುತ್ತಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಅವರ ಮಕ್ಕಳು, ಮೊಮ್ಮಕ್ಕಳ ಆಸರೆ ಸಿಗಬಹುದು. ಈ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ಮಕ್ಕಳಿಗಾಗಿ ಇಡೀ ಜೀವಮಾನ ದುಡಿದು, ಉಳಿತಾಯದ ಹಣ ಇಲ್ಲದೇ ವೃದ್ದಾಪ್ಯಕ್ಕೆ ಕಾಲಿಟ್ಟವರೇ ಬಹುತೇಕರು. ಹಣಕಾಸು ಸಮಸ್ಯೆ ಮಾತ್ರವಲ್ಲ ವೃದ್ದಾಪ್ಯದಲ್ಲಿ ಆರೋಗ್ಯ ಸಮಸ್ಯೆಯೂ ಬಹಳವಾಗಿ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಹಿರಿಯ ಜೀವಗಳಿಗೆ ಭದ್ರತೆ ಒದಗಿಸುವ ಬಲಿಷ್ಠ ವ್ಯವಸ್ಥೆ ನಿರ್ಮಾಣವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net