

ಹೊಳೆನರಸೀಪುರ: ನಮ್ಮನ್ನು ಕಾಡುವ ಆರೋಗ್ಯ ಸಮಸ್ಯೆಗೆ ಸ್ಚಚ್ಛತೆ ಇಲ್ಲದಿರುವುದೇ ಕಾರಣ. ಆದ್ದರಿಂದ ನಮ್ಮ ಮನೆ ಮತ್ತು ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ವೈಯಕ್ತಿಕ ಹಾಗೂ ಸಮುದಾಯದ ಆರೋಗ್ಯವನ್ನು ಕಾಪಾಡುವಂತೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಸಲಹೆ ನೀಡಿದರು.
ಸ್ವಚ್ಛಭಾರತ್ ಅಭಿಯಾನದ ಅಂಗವಾಗಿ ಬುಧವಾರ ಸರ್ಕಾರಿ ಆಸ್ಪತ್ರೆಯ ಹೊರ ಆವರಣದಲ್ಲಿ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಎಲ್ಲ ಆಸ್ತಿಗಳನ್ನು ಜನರು ತಮ್ಮದೆಂದು ಭಾವಿಸಿ ಸ್ವಚ್ಛವಾಗಿಟ್ಟುಕೊಳ್ಳಿ. ಶುಚಿತ್ವ ಇಲ್ಲದಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯೂದಂತಹ ರೋಗಗಳು ಹರಡುವ ಅಪಾಯ ಇರುತ್ತದೆ ಎಂದು ಎಚ್ಚರಿಸಿದರು.
ಡಾ. ವಿನಯ್, ಡಾ.ರೇಖಾ, ಡಾ.ಸುಹೇಲ್, ಫಾರ್ಮಾಸಿಸ್ಟ್‌ಗಳು, ದಾದಿಯರು ಹಾಗೂ ಸಿಬ್ಬಂದಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಆವರಣವನ್ನು ಸ್ವಚ್ಛಗೊಳಿಸಿದರು.