

ಹನೂರು: ತಾಲೂಕಿನ ಮಲೆಮಹದೇಶ್ವರಬೆಟ್ಟದಲ್ಲಿ ಮಂಗಳವಾರ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ವಿವಿಧೆಡೆ ತೆರಳಿ ಪರಿಶೀಲಿಸಿ ನೌಕರರಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ದೀಪಾವಳಿ ಜಾತ್ರೆಗೆ ಲಕ್ಷಾಂತರ ಭಕ್ತರು ಮಹದೇಶ್ವರಬೆಟ್ಟಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವ ಸಂಬಂಧ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಕಾರ್ಯದರ್ಶಿ ಸುತ್ತಮುತ್ತಲ ಆವರಣವನ್ನು ವೀಕ್ಷಿಸಿದರು. ಈ ವೇಳೆ ಆಗ್ಗಾಗ್ಗೆ ಸ್ವಚ್ಛಗೊಳಿಸುವುದರ ಮೂಲಕ ಬಸ್ ನಿಲ್ದಾಣದಲ್ಲಿ ನೈರ್ಮಲ್ಯ ಕಾಪಾಡಬೇಕು. ಯಾವುದೇ ಕಾರಣಕ್ಕೂ ಭಕ್ತರಿಗೆ ಕಿರಿಕಿರಿಯಾಗಬಾರದು ಎಂದು ನೌಕರರಿಗೆ ಸೂಚಿಸಿದರು.
ಬಳಿಕ ದಾಸೋಹ ಸಮೀಪ ಬಳಕೆಗೆ ಬಾರದೆ ನಿರುಪಯುಕ್ತವಾಗಿದ್ದ ಸಾರ್ವಜನಿಕ ಶೌಚಗೃಹಕ್ಕೆ ತೆರಳಿ ಪರಿಶೀಲಿಸಿದ ಅವರು, ಶೌಚಗೃಹವನ್ನು ಶುಚಿಗೊಳಿಸುವುದರ ಜತೆಗೆ ನೀರಿನ ಸೌಕರ್ಯ ಕಲ್ಪಿಸಿ ಜಾತ್ರೆಗೆ ಆಗಮಿಸುವ ಭಕ್ತರ ಬಳಕೆಗೆ ನೀಡಬೇಕು. ಜತೆಗೆ ಮುಂದಿನ ದಿನಗಳಲ್ಲೂ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದ ಅವರು, ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ತೆರಳಿ ನಿರ್ವಹಣೆ ಸಂಬಂಧ ಅಲ್ಲಿನ ಸಿಬ್ಬಂದಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು.
ಪ್ರಾಧಿಕಾರದ ನೌಕರರಾದ ಮಹೇಶ್, ನಾಗರಾಜು, ಎಸ್.ರಾಜು, ದೊರೆ, ಮೇಸ್ತ್ರಿ ಮಹೇಶ್ ಮತ್ತಿತರರು ಇದ್ದರು.