

ಕುಂದಾಪುರ: ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಶನಿವಾರ ಬ್ರಹ್ಮರಥೋತ್ಸವ ನಡೆಯಿತು. ಮಹಿಷಾಸುರಮರ್ದಿನಿ ರಥದಲ್ಲಿ ಆಗಮಿಸುವ ದಿವ್ಯ ಸೊಬಗನ್ನು ಭಕ್ತರು ಕಣ್ತುಂಬಿಕೊಂಡರು.
ಕಲಶ ಸ್ಥಾಪನೆ, ಪ್ರಧಾನಾಧಿವಾಸ ಹೋಮ, ಕಲಶಾಭಿಷೇಕ, ರಥಶುದ್ಧಿ, ಉತ್ಸವ ಬಲಿ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನಡೆದವು. ಪ್ರಧಾನ ತಂತ್ರಿಗಳಾಗಿ ದಿ.ವಿದ್ವಾನ್ ಚಂದ್ರಶೇಖರ ಸೋಮಯಾಜಿಯವರ ಪುತ್ರರು, ಪ್ರಧಾನ ಅರ್ಚಕರಾಗಿ ಗಿರೀಶ್ ಭಟ್ ಬಗ್ವಾಡಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ರಥೋತ್ಸವಕ್ಕೂ ಮೊದಲು ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡರು.
ಈ ಬಾರಿ ವಿಶೇಷವಾಗಿ ಶ್ರೀ ಮಹಿಷಾಸುರಮರ್ದಿನಿ ದೇವಿಗೆ ಮನೆ ಮನೆಯಿಂದ ಹಣ್ಣುಕಾಯಿ ಸೇವೆ ಸಮರ್ಪಣೆ ಮಾಡಲಾಯಿತು. ರಥೋತ್ಸವದ ವಿಶೇಷವಾಗಿ ದೇವಸ್ಥಾನ ಎದುರಿನ ಶಿಲೆಯ ಧ್ವಜಸ್ತಂಭಕ್ಕೆ ತಾಮ್ರ ಹಾಗೂ ಹಿತ್ತಾಳೆಯ ಹೊದಿಕೆ ಮಾಡಲಾಗಿತ್ತು. ದೇವಿಗೆ ಬೆಳ್ಳಿಯ ಪೀಠ ಸಮರ್ಪಿಸಲಾಗಿತ್ತು. ರಾಜ ರಾಣಿ ಹೊಸ ತಟ್ಟಿರಾಯಗಳು ಈ ವರ್ಷದ ವಿಶೇಷ ಅತಿಥಿಗಳಾಗಿ ಗಮನಸೆಳೆದವು.
ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಕುಂದಾಪುರ ಶಾಖೆಯ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಕಾರ್ಯದರ್ಶಿ ಪ್ರಭಾಕರ ಸೇನಾಪುರ ಮತ್ತಿತರರು ಉಪಸ್ಥಿತರಿದ್ದರು.