

ಬೆಂಗಳೂರು: ಹಾಸನದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯರಿಗೆ ಪ್ರತ್ಯೇಕ ಆಪ್ತಸಮಾಲೋಚನೆ ಹಾಗೂ ಪುನರ್ವಸತಿ ಕೇಂದ್ರ ತೆರೆದು ರಕ್ಷಣೆ ನೀಡಬೇಕು ಎಂದು ‘ನಾವೆದ್ದು ನಿಲ್ಲದಿದ್ದರೆ ಸಂಘಟನೆ’ ಸದಸ್ಯರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಂತ್ರಸ್ತೆಯರಿಗೆ ಆಯೋಗವು ಮಾನಸಿಕ, ಆರ್ಥಿಕ ಹಾಗೂ ವೈದ್ಯಕೀಯ ಬೆಂಬಲ ನೀಡಬೇಕು. ಅವರ ಗೌಪ್ಯತೆ ಕಾಪಾಡಲು ಸಹಾಯವಾಣಿ ಆರಂಭಿಸಿ, ಅವರಿಗೆ ಭರವಸೆ ನೀಡಿದರೆ ಹಗರಣ ಕುರಿತು ಇನ್ನಷ್ಟು ದೂರುಗಳು ದಾಖಲಾಗಬಹುದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಕಾನೂನು ಸೇವಾ ಆಯೋಗದ ಪರಿಹಾರ ಯೋಜನೆಯ ಭಾಗವಾಗಿ ಸಂತ್ರಸ್ತೆಯರಿಗೆ ಪರಿಹಾರ ನೀಡಬೇಕು. ಸಂತ್ರಸ್ತರೊಬ್ಬರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಭವಾನಿ ರೇವಣ್ಣ ಹಾಗೂ ಎಚ್. ಡಿ. ರೇವಣ್ಣ ಅವರಿಗೆ ನೀಡಿರುವ ನಿರೀಕ್ಷಣಾ ಜಾಮೀನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲಾ, ನಾವೆದ್ದು ನಿಲ್ಲದಿದ್ದರೆ ಸಂಘಟನೆಯ ಮಧು ಭೂಷಣ್, ಮಮತಾ ಯಜಮಾನ್, ಗೌರಿ ಮಲ್ಲಿಗೆ, ಗೀತಾ ಮೆನನ್, ವಿನಯ್ ಶ್ರೀನಿವಾಸ್ ಇತರರು ಇದ್ದರು.