ಚುನಾವಣಾ ಗಿಮಿಕ್‌ಗಾಗಿ ಸಾ.ರಾ.ಮಹೇಶ್ ಪ್ರತ್ಯಕ್ಷ

07 KRN-1
Published on

ಕೆ.ಆರ್.ನಗರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಕ್ಷೇತ್ರ ಬಿಟ್ಟು ಪಲಾಯನ ಮಾಡಿ ಈಗ ಚುನಾವಣಾ ಗಿಮಿಕ್‌ಗಾಗಿ ಪ್ರತ್ಯಕ್ಷವಾಗಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಹತಾಶೆಯಿಂದ ನನ್ನ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ಆಕ್ರೋಶ ವ್ಯಕ್ತಪಡಿಸಿದರು.


ನಾನು ಅವಕಾಶವಾದಿ ರಾಜಕಾರಣಿಯಾಗಿದ್ದು, ಹೋರಾಟಗಾರನಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಕಳೆದ 20 ವರ್ಷಗಳಿಂದ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಜನರ ನಡುವೆ ಕೆಲಸ ಮಾಡಿ ಅವರ ಸಂಕಷ್ಟವನ್ನು ಅರಿತು ಸ್ಪಂದಿಸುವ ಮನೋಭಾವನೆ ಬೆಳೆಸಿಕೊಂಡಿದ್ದರಿಂದಲೇ ಕಾಂಗ್ರೆಸ್ ನನ್ನನ್ನು ಗುರುತಿಸಿ ನಮ್ಮ ತಂದೆಯವರಿಗೆ ಒಂದು ಬಾರಿ ಹಾಗೂ ನನಗೆ ಎರಡು ಬಾರಿ ಬಿ.ಫಾರ್ಮ್ ನೀಡುವುದರ ಜತೆಗೆ ಮತದಾರರ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸಾರ್ವಜನಿಕವಾಗಿ ಭಿಕ್ಷೆ ಬೇಡುವ ಸ್ಥಿತಿಯನ್ನು ಕ್ಷೇತ್ರದ ಜನತೆ ಈವರೆಗೆ ನನಗೆ ನೀಡಿಲ್ಲ, ಆದರೆ ನಾನು ಪ್ರತಿ ಚುನಾವಣೆಯಲ್ಲಿಯೂ ಮತದಾರರ ಮನೆ ಬಾಗಿಲಿಗೆ ಹೋಗಿ ಮತ ಭಿಕ್ಷೆ ಬೇಡಿದ್ದು, ಅವರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಅರಿಯದ ಸಾ.ರಾ.ಮಹೇಶ್ ಸೋಲಿನ ಆಘಾತದಿಂದ ಹೊರ ಬಾರದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.


ಸಾ.ರಾ.ಮಹೇಶ್ ಎಂದೂ ಅಭಿವೃದ್ಧಿ ರಾಜಕಾರಣ ಮಾಡಿ ಜನರ ಮನಸನ್ನು ಗೆದ್ದವರಲ್ಲ, ಅವರದೇನಿದ್ದರೂ ಸುಳ್ಳಿನ ರಾಜಕಾರಣ ಎಂದು ಟೀಕೆ ಮಾಡಿದ ಶಾಸಕರು, 15 ವರ್ಷಗಳ ಅವಧಿಯಲ್ಲಿ ನೀವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮಾಧ್ಯಮ ಮತ್ತು ಜನರನ್ನು ಕೆರೆದುಕೊಂಡು ಹೋಗಿ ಪರಿಶೀಲನೆ ಮಾಡೋಣ ಎಂದು ಪಂಥಾಹ್ವಾನ ನೀಡಿದರಲ್ಲದೆ, ಇದಕ್ಕೆ ನೀವು ಸಿದ್ಧರಾಗಿದ್ದೀರಾ ಎಂದ ಸವಾಲು ಎಸೆದರು.


ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ಪುರಸಭೆ ಮಾಜಿ ಅಧ್ಯಕ್ಷರಾದ ನರಸಿಂಹರಾಜು, ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಮಿಕ್ಸರ್ ಶಂಕರ್, ಜಾವಿದ್‌ಪಾಷ, ಸೈಯದ್‌ಸಿದ್ದಿಕ್, ಶಿವುನಾಯಕ್, ಶಂಕರ್‌ಸ್ವಾಮಿ, ಮುಖಂಡರಾದ ಗೀತಾ ಮಹೇಶ್, ನಂದೀಶ್, ಕಂಠಿಕುಮಾರ್, ಪುಟ್ಟರಾಜು ಸುದ್ದಿಗೋಷ್ಠಿಯಲ್ಲಿದ್ದರು.

ತಂದೆ ಹಣ ಪಡೆದಿದ್ದರೆ ರಾಜಕೀಯ ನಿವೃತ್ತಿ: ಒಂದು ತಿಂಗಳ ಹಿಂದೆ ಪಟ್ಟಣದ ಪುರಸಭೆಗೆ ಸೇರಿದ 72 ವಾಣಿಜ್ಯ ಮಳಿಗೆಗಳ ಹರಾಜು ಸಂದರ್ಭದಲ್ಲಿ ನಾನು ಮತ್ತು ನಮ್ಮ ತಂದೆ ದೊಡ್ಡಸ್ವಾಮೇಗೌಡರು ಹಣ ಪಡೆದಿದ್ದೇವೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಬೆಂಬಲಿಗರು ಆರೋಪ ಮಾಡುತ್ತಿದ್ದು ಇದು ಸಾಬೀತಾದರೆ ರಾಜಕೀಯವಾಗಿ ಶಾಶ್ವತವಾಗಿ ನಿವೃತ್ತಿಯಾಗುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಸವಾಲು ಎಸೆದರು.
20 ವರ್ಷಗಳ ತಮ್ಮ ರಾಜಕೀಯ ಜೀವನದ ಅವಧಿಯಲ್ಲಿ ಕೆ.ಆರ್.ನಗರ ಕ್ಷೇತ್ರದ ಜನತೆಗೆ 400 ಕೋಟಿ ರೂ. ವೈಯಕ್ತಿಕ ಹಣವನ್ನು ಖರ್ಚು ಮಾಡಿದ್ದೇನೆ ಎಂದು ಹೇಳಿರುವ ಸಾ.ರಾ.ಮಹೇಶ್ ಅವರಿಗೆ ಈ ಹಣ ಎಲ್ಲಿಂದ ಬಂತು ಎಂಬುದನ್ನು ಸಾರ್ವಜನಿಕವಾಗಿ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net