

ಶ್ರೀರಂಗಪಟ್ಟಣ: ಮೊದ ಮೊದಲು ಸನಾತನಿಯಂತೆ ವರ್ತಿಸುತ್ತಿದ್ದ ಗಾಂಧೀಜಿ ನಂತರದ ಕಾಲಘಟ್ಟದಲ್ಲಿ ಆದ ಅನುಭವಗಳಿಂದ ಅಂತರ್ಜಾತಿಗಳಲ್ಲದ ವಿವಾಹಗಳಿಗೆ ಹೋಗದಿರಲು ನಿರ್ಧರಿಸಿ ಜಾತಿ ಪದ್ಧತಿ ವಿರುದ್ಧ ನಿಂತರು ಎಂದು ಚಾಮರಾಜನಗರದ ಹಿರಿಯ ಗಾಂಧಿವಾದಿ ಹಾಗೂ ನಿವೃತ್ತ ಆರೋಗ್ಯಾಧಿಕಾರಿ ವೆಂಕಟರಾಜು ತಿಳಿಸಿದರು.
ಪಟ್ಟಣ ಸಮೀಪದ ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ಮಹಾತ್ಮ ಗಾಂಧಿ ಅವರ ಚಿತಾಭಸ್ಮ ವಿಸರ್ಜಿಸಿ ಸ್ಮರಣೆಗಾಗಿ ಪ್ರತಿವರ್ಷದಂತೆ ಸಮಿತಿ ಸುಬ್ರಮಣ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸರ್ವೋದಯ ಮೇಳದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಭಾರತದ ವಾಸ್ತವತೆಯನ್ನು ಅರಿತು ಭಾರತೀಯರ ಏಕತೆ ಹಾಗೂ ಸ್ವಾತಂತ್ರೃಕ್ಕಾಗಿ ಮುನ್ನಡೆದ ಗಾಂಧೀಜಿ ಎಲ್ಲವನ್ನೂ ತ್ಯಾಗ ಮಾಡುತ್ತಲೇ ಮಹಾತ್ಮರಾದರು. ಅಹಿಂಸಾ ಮಾರ್ಗದಲ್ಲೇ ದೇಶದ ಸ್ವಾತಂತ್ರೃ ಪಡೆಯಲು ಗಟ್ಟಿಯಾಗಿ ನಿಶ್ಚಯಿಸಿದ್ದ ಗಾಂಧೀಜಿ ಆಗಲೇ ಇಂಗ್ಲೆಂಡ್‌ನಲ್ಲಿ ಓದುತ್ತಲೇ ಸ್ವಾತಂತ್ರೃಕ್ಕಾಗಿ ಕ್ರಾಂತಿಕಾರಿ ಮಾರ್ಗದ ಹೆಜ್ಜೆ ಹಾಕುತ್ತಿದ್ದ ಸಾರ್ವಕರ್ ಸೇರಿದಂತೆ ಭಾರತೀಯ ಯುವಜನರನ್ನು ಸಭೆಯ ಮೂಲಕ ಒಂದೂಗೂಡಿಸಿ ಚರ್ಚೆ ನಡೆಸಿ ಹಿಂದ್ ಸ್ವರಾಜ್ ಮೂಲಕ ಶಾಂತಿ ಮಂತ್ರವನ್ನು ಹೇಳಿಕೊಟ್ಟವರು ಹೌದು ಎಂದರು.
ಶುದ್ಧ ಸಸ್ಯಾಹಾರಿ ಆಹಾರಕ್ಕೆ ಬದಲಾಗಿದ್ದ ಗಾಂಧೀಜಿ ಸಾರ್ವಕರ್ ಬಡಿಸಲು ಮುಂದಾದ ಮಾಂಸದೂಟವನ್ನು ನಿರಾಕರಿಸಿ ಅಹಿಂಸಾ ನೀತಿಯ ಕುರಿತು ಗಟ್ಟಿ ಧನಿ ಎತ್ತಿದರು. ಬ್ರಿಟೀಷರನ್ನು ಭಾರತದಿಂದ ಹೊರ ಓಡಿಸಿ ಅವರು ಅಲಂಕರಿಸಿದ್ದ ಉನ್ನತ ಸ್ಥಾನಗಳಿಗೆ ಭಾರತೀಯರನ್ನು ಕೂರಿಸಿದ ಮಾತ್ರಕ್ಕೆ ನಾವು ಸ್ವಾತಂತ್ರೃ ಪಡೆದವರಾಗುವುದಿಲ್ಲ, ಬದಲಿಗೆ ನಾವು ನಮ್ಮೊಳಗಿನ ವಿರೋಧಿತನ ಹಾಗೂ ಕ್ರಾಂತಿಕಾರಿ ನೀತಿಯನ್ನು ಸಂಪೂರ್ಣ ಬದಲಿಸಿಕೊಂಡು ಭರತ ನೆಲದ ಸಮಾನತೆ ಹಾಗೂ ಶಾಂತಿ-ಸೌರ್ಹಾದತೆಯ ನೀತಿ ಅನುಸರಿಸಬೇಕು ಎಂಬ ಸ್ಪಷ್ಟ ಸಂದೇಶ ನೀಡಿದ್ದರು ಎಂದರು.
ಕಾರ್ಯಕ್ರಮದ ಆಯೋಜಕ ಹಿರಿಯ ಗಾಂಧಿವಾದಿ ಡಾ.ಬಿ.ಸುಜಯ್ ಕುಮಾರ್, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗುಂಡಪ್ಪಗೌಡ, ಮಂಡ್ಯ ಗಾಂಧಿ ಭವನದ ಅಧ್ಯಕ್ಷ ಬಂಧುಕಾರ್ ಲಿಂಗಣ್ಣ, ಪರಿಸರವಾದಿ ಸಂತೋಷ್ ಕೌಲಗಿ, ಗಾಂಧಿವಾದಿಗಳಾದ ಪಿ.ವಿಶ್ವನಾಥ್, ಪ್ರೊ.ಕಾಳಚನ್ನೇಗೌಡ, ಮೈಸೂರು ಅಮೆಚೂರ್ ನಾಚುರಲಿಸ್ಟ್ ಮನು, ಹಿರಿಯ ವಕೀಲ ಜಯಸ್ವಾಮಿ, ಅಚೀವರ್ಸ್ ಅಕಾಡೆಮಿ ಸಂಸ್ಥಾಪಕ ಡಾ.ರಾಘವೇಂದ್ರ, ಸಾಹಿತಿ ಶಿವಕುಮಾರ್, ಚಿಕ್ಕತಮ್ಮೇಗೌಡ ಹಾಗೂ ಮೈಸೂರಿನ ವಿದ್ಯಾವರ್ಧಕ ಮತ್ತು ಶೇಷಾದ್ರಿಪುರಂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.