

ಸುಂಟಿಕೊಪ್ಪ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಗಾಂಧಿ ಜಯಂತಿ ಅರ್ಥಪೂರ್ಣವಾಗುತ್ತದೆ ಎಂದು ಮಡಿಕೇರಿಯ ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಕುಮಾರ ಹೇಳಿದರು.
ಸುಂಟಿಕೊಪ್ಪ ಸಮೀಪದ ಗುಂಡುಗುಟ್ಟಿಯ ಸ್ವರ್ಣಾಲಯದಲ್ಲಿ ಮಹಾತ್ಮ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ಅವರು ವಿಶ್ವ ಮಾನವತ್ವ ವ್ಯಕ್ತಿತ್ವವನ್ನು ಹೊಂದಿರುವುದಕ್ಕೆ ಅವರ ಆದರ್ಶಗಳೇ ಸಾಕ್ಷಿ ಎಂದರು.
ಟ್ರಸ್ಟ್ ಅಧ್ಯಕ್ಷ ಮುಕುಲ್ ಮಹೀಂದ್ರ ಮಾತನಾಡಿ, ಮಹಾತ್ಮ ಗಾಂಧಿ ಅವರು ತಂಗಿದ್ದ ಸ್ಥಳವನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯಪ್ರವೃತ್ತವಾಗಿದೆ. ಎಲ್ಲರ ಸಹಕಾರದಿಂದ ನಮ್ಮ ಕನಸನ್ನು ನನಸಾಗಿಸೋಣ ಎಂದು ಹೇಳಿದರು.
ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಪಿ.ಉಷಾ, ಬೆಂಗಳೂರಿನಲ್ಲಿ ಡಿವೈಎಸ್‌ಪಿಯಾಗಿರುವ ಕರೀಂ ರವಾತರ್, ಎಂ.ಇ.ಮೊದ್ದೀನ್, ಟ್ರಸ್ಟ್ ಕಾರ್ಯದರ್ಶಿ ಡೆನ್ನಿಸ್ ಡಿಸೋಜ, ಟ್ರಸ್ಟಿ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿಜಿವಿ ಕುಮಾರ್, ಟ್ರಸ್ಟ್ ಕೋಶಾಧಿಕಾರಿ ರಮೇಶ್ ಪಿಳ್ಳೆ, ಟ್ರಸ್ಟಿ ಜಾಹಿದ್ ಅಹ್ಮದ್, ಸಾಹಿತಿ ವಹೀದ್ ಜಾನ್ , ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಉಪಸ್ಥಿತರಿದ್ದರು.